ಶಿವಮೊಗ್ಗದ ವಾಹನ ಸವಾರರ ಮೇಲೆ ಕ್ಯಾಮರಾ ಕಣ್ಣು!
– ಆಟೋಮ್ಯಾಟಿಕ್ ದಂಡ ಹಾಕಲು ಕಾದಿವೆ ಕ್ಯಾಮರಾಗಳು..ಮನೆಗೆ ಬರುತ್ತೆ ನೋಟೀಸ್!
– ಪೊಲೀಸ್ ಇಲಾಖೆಯ ವಿಡಿಯೋ ವೈರಲ್.. ಏನಿದು ಯೋಜನೆ…?
NAMMUR EXPRESS NEWS
ಶಿವಮೊಗ್ಗ: ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ, ನಿಲ್ಲಿಸುವವರಿಗೆ ಶಿವಮೊಗ್ಗ ನಗರದಲ್ಲಿ ಇದೀಗ ಕ್ಯಾಮರಾಗಳೇ ಹುಡುಕಿ ದಂಡ ಹಾಕಲಿವೆ. ಶಿವಮೊಗ್ಗ ನಗರದಲ್ಲಿ ಆಟೊಮ್ಯಾಟಿಕ್ ಕ್ಯಾಮರಾ ಜೋಡಿಸಲಾಗಿದ್ದು, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಮನೆ ಬಾಗಿಲಿಗೆ ದಂಡದ ನೊಟೀಸ್ ತಲುಪಲಿದೆ.
ಏನಿದು ಯೋಜನೆ?: ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಸಿದ್ಧಪಡಿಸಿರುವ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ (ಐಟಿಎಂಎಸ್) ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಹಾಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ಚಲಿಸಬೇಕಿದೆ.
ಯಾವುದಕ್ಕೆಲ್ಲ ದಂಡ ಫಿಕ್ಸ್?
ದಂಡ 1 : ಸಿಗ್ನಲ್ಗಳಲ್ಲಿ ರೆಡ್ ಲೈಟ್ ಇದ್ದರು ವಾಹನಗಳನ್ನು ನುಗ್ಗಿಸುವುದು, ಜೀಬ್ರಾ ಕ್ರಾಸ್ ದಾಟಿ ಮುಂದೆ ನಿಲ್ಲುವುದು.
ದಂಡ 2 : ಸಿಗ್ನಲ್ ಲೈಟ್ನಲ್ಲಿ ಫ್ರೀ ಲೆಫ್ಟ್ ತೋರಿಸದೆ ಇದ್ದಾಗಲೂ ವಾಹನಗಳನ್ನು ಅನಾಯಾಸವಾಗಿ ಎಡಗಡೆಗೆ ತಿರುಗಿಸಿ ಚಲಿಸುವುದು.
ದಂಡ 3 : ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾವಣೆ ಮಾಡುವುದು. ಹಾಫ್ ಹೆಲ್ಮೆಟ್ ಧರಿಸಿ ಬೈಕುಗಳಲ್ಲಿ ಓಡಾಡುವುದು.
ದಂಡ 4 : ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತಲೂ ಹೆಚ್ಚು ಮಂದಿ ಪ್ರಯಾಣ ಮಾಡುವುದು. ಅತಿ ವೇಗ ಮತ್ತು ಅಡ್ಡಾದಿಡ್ಡ ವಾಹನ ಓಡಿಸುವುದು.
ದಂಡ 5 : ವಾಹನಗಳ ಚಲಾವಣೆ ವೇಳೆ ಮೊಬೈಲ್ ಫೋನ್ ಬಳಕೆ ಮಾಡುವುದು.
ದಂಡ 6 : ಸೀಟ್ ಬೆಲ್ಟ್ ಧರಿಸದೆ ಕಾರು ಚಲಾವಣೆ ಮಾಡುವುದು.
ದಂಡ 7 : ಒನ್ ವೇ ರಸ್ತೆಯಲ್ಲಿ ಮತ್ತೊಂದು ದಿಕ್ಕಿನಿಂದ ವಾಹನದಲ್ಲಿ ಸಂಚರಿಸುವುದು.
ಹೀಗೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಸ್ಮಾರ್ಟ್ ಸಿಟಿ ಕ್ಯಾಮರಾಗಳಲ್ಲಿ ಸೆರೆಯಾಗಲಿದೆ. ಇದು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ಗೆ ಮಾಹಿತಿ ತಲುಪಲಿದೆ. ಅಲ್ಲಿ ಪರಿಶೀಲನೆ ನಡೆಸಿ ವಾಹನ ಮಾಲೀಕರ ಮೊಬೈಲ್ಗೆ ಎಸ್ಎಂಎಸ್ ಮೂಲಕ ನೊಟೀಸ್ ಬರಲಿದೆ. ಇಲ್ಲವಾದಲ್ಲಿ ಮನೆಗೆ ನೊಟೀಸ್ ತಲುಪಲಿದೆ.
ಹೈಟೆಕ್ ಕ್ಯಾಮರಾ ಏನು ಮಾಡುತ್ತವೆ?
ಶಿವಮೊಗ್ಗದ ವಿವಿಧ ರಸ್ತೆಗಳಲ್ಲಿ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಾಹನಗಳು ಎಷ್ಟೇ ವೇಗದಲ್ಲಿದ್ದರೂ ಅವುಗಳ ನಂಬರ್ ಪ್ಲೇಟ್ ಸುಲಭಕ್ಕೆ ಗೊತ್ತಾಗಲಿದೆ. ಇನ್ನು, ಕಾರಿನ ಒಳಗಿರುವವರು ಸೀಟ್ ಬೆಲ್ಟ್ ಧರಿಸದೆ ಇರುವುದು ಕೂಡ ಸ್ಪಷ್ಟವಾಗಿ ಗೊತ್ತಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಲು ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. 24 ಗಂಟೆಯು ಕ್ಯಾಮರಾಗಳು ಚಾಲನೆಯಲ್ಲಿರಲಿವೆ.