ನೀರಿನ ಮೋಹಕ್ಕೆಬಾಲಕ ಬಲಿ..!
– ಕಡೂರಿನಲ್ಲಿ ನಡೆದ ಘಟನೆ: ಬಾಲಕನ ಶವ ಪತ್ತೆ
– ಮೂಡಿಗೆರೆ: 60 ಸೀಟಿನ ಸರ್ಕಾರಿ ಬಸ್ಸಲ್ಲಿ 150 ಜನ…!
– ಕಾಫಿನಾಡು ತಲುಪಿದ ಸೌಜನ್ಯ ಪಾದಯಾತ್ರೆ
– ಹೆಂಡ್ತಿ ಮನೆ ಮುಂದೆ ಗಂಡನ ವಾಮಾಚಾರ: ಅರೆಸ್ಟ್
– ಇಸ್ಪೀಟ್ ದಂಧೆಯಲ್ಲಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ
NAMMUR EXPRESS NEWS
ಕಡೂರು: 15 ವರ್ಷದ ಬಾಲಕ ಈಜಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ಕಡೂರು ತಾಲೂಕಿನ ಹಾರುವನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮೃತ ಬಾಲಕನನ್ನು ಕಡೂರು ಪಟ್ಟಣದ ಕಲುಂಡಿ ಲೇಔಟ್ ನಿವಾಸಿ ಪಾರ್ಥಸಾರಥಿ (15) ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಬಾಲಕ ಭಾನುವಾರ (ಆಗಸ್ಟ್ 27) ಮಧ್ಯಾಹ್ನ ಆಟವಾಡಲು ಹೊರಗೆ ಹೋಗುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿದ್ದನು ಮತ್ತು ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಪೋಷಕರು ಆತಂಕದಿಂದ ಹುಡುಕಾಡಿದರೂ ಬಾಲಕನ ಸುಳಿವು ಸಿಕ್ಕಿಲ್ಲ. ಏತನ್ಮಧ್ಯೆ, ಹುಡುಗನ ಪೋಷಕರು ಹತಾಶ ಹುಡುಕಾಟವನ್ನು ಪ್ರಾರಂಭಿಸಿದರು, ಆದರೆ ಅವನ ಗುರುತು ಪತ್ತೆಯಾಗಲಿಲ್ಲ.ಕೊನೆಗೆ ಶವ ಪತ್ತೆಯಾಗಿದೆ.
ಕೊಟ್ಟಿಗೆಹಾರದಲ್ಲಿ ಸೌಜನ್ಯ ಪ್ರಕರಣದ ಪ್ರತಿಭಟನೆ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆ.ಆರ್.ಎಸ್) ವತಿಯಿಂದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ನ್ಯಾಯ ದೊರಕಿಸಲು ಪ್ರತಿಭಟನಾ ನಡಿಗೆ ಮೂರು ದಿನದಿಂದ ಆರಂಭವಾಗಿದ್ದು ಸೋಮವಾರ ಸಂಜೆ ಕೊಟ್ಟಿಗೆಹಾರ, ಬಣಕಲ್ಗೆ ತಲುಪಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮಾತನಾಡಿ ‘ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯಾವ ಒತ್ತಡಕ್ಕೂ ಮಣಿಯದೇ ಮರು ತನಿಖೆಗೆ ಆದೇಶಿಸಬೇಕು. ಸೌಜನ್ಯ ಮಹಿಳಾ ಆಯೋಗ ಸ್ಥಾಪನೆಯಾಗಬೇಕು. ಸೌಜನ್ಯ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ತನಿಖಾಧಿಕಾರಿ ವಿರುದ್ಧ ತನಿಖೆಯಾಗಬೇಕು. ಪ್ರಕರಣದ ದಾರಿ ತಪ್ಪಿಸಿದ ಪೊಲೀಸರ ಕ್ರಮಕ್ಕೂ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು. ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ಸಿ.ಎನ್.ದೀಪಕ್, ರಘುಪತಿ, ಮಲ್ಲಿಕಾರ್ಜುನ್ ಭಟ್ನಳ್ಳಿ, ಆರೋಗ್ಯಸ್ವಾಮಿ, ಜೀವನ್, ಎನ್. ಮೂರ್ತಿ, ರವಿಕುಮಾರ್, ಮೋಹನ್ ಪಕ್ಷದ ಕಾರ್ಯಕರ್ತರು ಇದ್ದರು.
ಇಸ್ಪೀಟ್ ದಂಧೆಯಲ್ಲಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ!
ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ. ಇಸ್ಪೀಟ್ ದಂಧೆ ಕುರಿತಂತೆ ಖಚಿತ ಮಾಹಿತಿ ಪಡೆದ ಜಿಲ್ಲಾ ಸೆನ್ ಠಾಣೆಯ ಪೊಲೀಸರು ಆ.27ರಂದು ಮೂಡಿಗೆರೆಯ ಕಾಡುಮಲ್ಲಿಗೆ ಎಸ್ಟೇಟ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬಣಕಲ್ ಠಾಣೆಯ ಹೆಡ್ ಕಾನ್ಹೇಬಲ್ ಚಂದ್ರಶೇಖರ್ ಕೂಡ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದ ಸೆನ್ ಪೊಲೀಸರು ಹೆಚ್ಚಿನ ಮಾಹಿತಿ ಪಡೆಯಲು ವಿಚಾರಣೆಗೊಳಪಡಿಸಿದ್ದಾರೆ.
60 ಸೀಟಿನ ಸರ್ಕಾರಿ ಬಸ್ಸಲ್ಲಿ 150 ಜನ…!
ಮೂಡಿಗೆರೆ: ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ನಿಲ್ಲೋಕೂ ಜಾಗವಿಲ್ಲದಷ್ಟು ಜನರು ತುಂಬಿದ್ದರು. ಕೋಪಗೊಂಡ ಮಹಿಳೆಯರು ಕಂಡಕ್ಟರ್ ಜೊತೆಗೆ ಗಲಾಟೆಗೆ ಇಳಿದು ಇನ್ನಷ್ಟು ಜನರನ್ನು ಬಸ್ ಗೆ ಹತ್ತಿಸಿಕೊಳ್ಳುವಂತೆ ದುಂಬಾಲು ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ನಡೆದಿದೆ. ಅಚ್ಚರಿ ಎಂದರೆ ಈ ಬಸ್ ಸಾಮರ್ಥ್ಯ 60 ಸೀಟ್. ಆದ್ರೆ 150 ಕ್ಕೂ ಹೆಚ್ಚು ಜನ ಇದ್ದರು.
ತವರು ಮನೆಗೆ ಹೋದ ಪತ್ನಿ ಮೇಲೆ ಸಿಟ್ಟಿಗೆ ವಾಮಾಚಾರ!
ಪತ್ನಿ ಪತಿ ಜೊತೆ ಜಗಳವಾಡಿದ್ದು, ಇದರಿಂದಾಗಿ ಪತ್ನಿ ತವರು ಮನೆಗೆ ಹೋಗಿದ್ದಾಳೆ. ತವರು ಮನೆಗೆ ಹೋದ ಪತ್ನಿಗೆ ಬುದ್ಧಿ ಕಲಿಸಬೇಕು ಅಂತ ಪತಿ ಪತ್ನಿಯ ತವರು ಮನೆಗೆ ಮಾಟ ಮಾಡಿಸಿರುವ ಹಾಸ್ಯಾಸ್ಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿ ಕಟ್ಟೆ ಗ್ರಾಮದಲ್ಲಿ ನಡೆದಿದೆ. ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದ ಸತೀಶ್ ಎಂಬುವರು ತನ್ನ ತಂಗಿ ಸುಮಿತ್ರರನ್ನ 12 ವರ್ಷಗಳ ಹಿಂದೆ ಮರಸಣಿಗೆ ಗ್ರಾಮದ ಗುರುಮೂರ್ತಿ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಗಿನಿಂದಲೂ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳನಡೆಯುತ್ತಲೇ ಇತ್ತು. ದೊಡ್ಡವರು ರಾಜಿ- ಪಂಚಾಯತಿ ಮಾಡುತ್ತಲೇ ಇದ್ದರು. ಕಳೆದ ಒಂದು ತಿಂಗಳ ಹಿಂದೆ ಗಂಡ ಹೆಂಡತಿ ಮಧ್ಯೆ ಮತ್ತೆ ಜಗಳವಾದ ಕಾರಣ ಸುಮಿತ್ರ ಅಣ್ಣನ ಮನೆ ಸೇರಿದ್ದಳು. ಇದರಿಂದ ಕೋಪಗೊಂಡ ಪತಿ ಗುರುಮೂರ್ತಿ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಸುಮಿತ್ರ ಅವರ ಅಣ್ಣ ಸತೀಶ್ ಮನೆ ಮುಂದೆ ಯಾವುದೋ ಪ್ರಾಣಿಯ ರಕ್ತಚೆಲ್ಲಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.