ವಿಮಾನ ಹಾರಾಟ ಕನಸು ನನಸು!
– ಆ.31ಕ್ಕೆ ಬೆಂಗಳೂರಿಂದ ಬರುತ್ತೆ ಮೊದಲ ವಿಮಾನ
– ಮೊದಲ ದಿನ ಯಾರೆಲ್ಲ ಪ್ರಯಾಣಿಸಲಿದ್ದಾರೆ?
– ವಿಮಾನ ಯಾನದ ವಿಶೇಷತೆ ಇಲ್ಲಿದೆ..!
NAMMUR EXPRESS NEWS
ಶಿವಮೊಗ್ಗ: ಬೆಂಗಳೂರು–ಶಿವಮೊಗ್ಗ ನಡುವೆ ಆ.31ರಿಂದ ವಿಮಾನಯಾನ ಸೇವೆ ಆರಂಭವಾಗಲಿದ್ದು ಮಲೆನಾಡ ಜನರ ದಶಕಗಳ ಕನಸು ನನಸಾಗಲಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸು, ಪುತ್ರ ಸಂಸದ ರಾಘವೇಂದ್ರ ಅವರ ನೇತೃತ್ವದಲ್ಲಿ ಅಂತೂ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಮೊದಲ ವಿಮಾನ ಬಂದಿಳಿಯಲಿದೆ.
ಯಾರೆಲ್ಲ ಪ್ರಯಾಣ ಮಾಡಲಿದ್ದಾರೆ?
ಇಂಡಿಗೋ ಸಂಸ್ಥೆಯ ವಿಮಾನ ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲ ಯಾನದಲ್ಲಿ, ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳು ಇರಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ವಾಟರರ್ ಸೆಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಈಗಾಗಲೇ ಸಂಭ್ರಮಕ್ಕೆ ಸಿದ್ಧತೆ ನಡೆದಿದೆ. ರಾಜ್ಯದ ಕಣ್ಣು ಈಗ ಶಿವಮೊಗ್ಗ ಮೇಲೆ ನೆಟ್ಟಿದೆ.
ಕೊನೆ ಗಳಿಗೆಯಲ್ಲಿ ಸಿಕ್ತು ಪರ್ಮಿಷನ್!
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನಯಾನ ಸೇವೆ ಆರಂಭದ ದಿನಾಂಕ ನಿಗದಿಯಾಗಿದ್ದರೂ ಒಂದು ಅನುಮತಿ ಪತ್ರಕ್ಕಾಗಿ ಕೊನೆಯ ಕ್ಷಣದವರೆಗೆ ಕಾಯುವಂತಾಯಿತು. ಒಂದು ವೇಳೆ ಈ ಅನುಮತಿ ಪತ್ರ ಸಿಗುವುದು ತಡವಾಗಿದ್ದರೆ, ಬೆಂಗಳೂರು – ಶಿವಮೊಗ್ಗ ವಿಮಾನಯಾನ ಸೇವೆ ಮತ್ತಷ್ಟು ವಿಳಂಬವಾಗುವ ಸಂಭವವಿತ್ತು. ಈ ಅಚ್ಚರಿಯ ವಿಚಾರವನ್ನು ಖುದ್ದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆ ಆಯೋಜಿಸಿದ್ದ ಫ್ಲೈ ಕರ್ನಾಟಕ ಹೈ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಬಾಂಬ್ ಥ್ರೆಟ್ ಕಂಟಿನ್ಜೆನ್ಸಿ ಪ್ಲಾನ್ ಎನ್ಒಸಿ ಕೊನೆಯ ಹಂತದಲ್ಲಿ ಲಭಿಸಿದ ರೋಚಕ ಸಂಗತಿ ತಿಳಿಸಿದ್ದಾರೆ. ದೆಹಲಿಯಿಂದ ಅಧಿಕಾರಿಗಳ ತಂಡ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲಿಸಿತು. ಆ.28ರ ಸಂಜೆ ಅನುಮತಿ ಪತ್ರ ಸಿಕ್ಕಿತು. ತುಂಬಾ ಸಮಾಧಾನವಾಯಿತು. ಆ.31ರಂದು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಶುರುವಾಗಲಿದೆ’ ಎಂದು ಸಂಸದ ರಾಘವೇಂದ್ರ ತಿಳಿಸಿದರು.