ವಿದ್ಯಾರ್ಥಿ ಶಾಲಾ ಬ್ಯಾಗ್ನಲ್ಲಿ ಹಾವು!
NAMMUR EXPRESS NEWS
ರಿಪ್ಪನ್ಪೇಟೆ : ರಿಪ್ಪನ್ ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಬ್ಯಾಗ್ನಲ್ಲಿ ಹಾವು ಪತ್ತೆಯಾಗಿದೆ. ಶುಕ್ರವಾರ ಬೆಳಿಗ್ಗೆ ತರಗತಿ ಪ್ರಾರಂಭವಾದಾಗ ನಲಿಕಲಿ ತರಗತಿಯ ಶಿಕ್ಷಕರು ಪಾಠ ಓದಲು ಬ್ಯಾಗ್ನಿಂದ ಪುಸ್ತಕ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ ಹಾಜರಿ ಕರೆಯುತ್ತಿದ್ದರು. ವಿದ್ಯಾರ್ಥಿ ಭುವನ್ ಪುಸ್ತಕ ತೆಗೆಯಲು ಮುಂದಾದಾಗ ಬ್ಯಾಗ್ನಲ್ಲಿ ಹಾವು ಮಲಗಿರುವುದನ್ನು ಕಂಡಿದ್ದಾನೆ. ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಮಣಿಕಂಠನಿಗೆ ಹಾವನ್ನು ತೋರಿಸಿದ್ದಾನೆ. ಅದನ್ನು ಕಂಡ ತಕ್ಷಣವೇ ಮಣಿಕಂಠ ಬ್ಯಾಗ್ನ ಜಿಪ್ ಎಳೆದು, ಶಿಕ್ಷಕರಿಗೆ ವಿಷಯ ತಿಳಿಸಿದ್ದಾನೆ. ಶಿಕ್ಷಕರು, ಬ್ಯಾಗ್ ಅನ್ನು ಶಾಲಾ ಕೊಠಡಿಯಿಂದ ಹೊರತಂದು ತೆರೆದು ನೋಡಿದಾಗ ಹಾವು ಇರುವುದು ಖಚಿತವಾಗಿದೆ. ನಂತರ ಪಾಲಕರನ್ನು ಕರೆಸಿ ಬ್ಯಾಗ್ನಲ್ಲಿದ್ದ ನಾಗರಹಾವನ್ನು ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ.