ಭದ್ರಾವತಿ ಎಂಪಿಎಂ ಕಾರ್ಖಾನೆ ಪ್ರಾರಂಭ.
– ಕಾರ್ಖಾನೆಯ ಕುರಿತು ಸೆ. 6 ರಂದು ಬೆಂಗಳೂರಿನಲ್ಲಿ ಸಭೆ
-ಸ್ಥಗಿತಗೊಂಡಿದ್ದ ವಿಐಎಸ್ಎಲ್ ಕಾರ್ಖಾನೆಗೆ ಮರುಜೀವ ಸಿಕ್ಕಿದೆ.
ಭದ್ರಾವತಿ : ಭದ್ರಾವತಿ ಪಟ್ಟಣದ ಎರಡು ಕಣ್ಣುಗಳೆಂದೇ ಕರೆಯಲಾಗುತ್ತಿದ್ದ, ಆರ್ಥಿಕತೆಯ ಜೀವನಾಡಿಗಳಾದ, ರಾಜ್ಯದ ಪ್ರಮುಖ ಕೈಗಾರಿಕೆಗಳಾದ ಕೇಂದ್ರ ಸರ್ಕಾರಿ ಸ್ವಾಮ್ಯದ ವಿಐಎಸ್ಎಲ್ (ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕಿನ ಕಾರ್ಖಾನೆ) ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ (ಮೈಸೂರು ಕಾಗದ ಕಾರ್ಖಾನೆ) ಮತ್ತೇ ಗತ ವೈಭವದತ್ತ ಮರಳುವ ಲಕ್ಷಣಗಳು ಗೋಚರವಾಗುತ್ತಿವೆ.
ಸ್ಥಗಿತಗೊಂಡಿದ್ದ ವಿಐಎಸ್ಎಲ್ ಕಾರ್ಖಾನೆಗೆ ಇತ್ತೀಚೆಗಷ್ಟೆ ಮರುಜೀವ ಸಿಕ್ಕಿದೆ. ಎನ್.ಆರ್.ಎಂ ಘಟಕದಲ್ಲಿ ಉಕ್ಕು ಉತ್ಪಾದನೆಗೆ ಚಾಲನೆ ದೊರೆತಿದೆ. ಇದರ ಬೆನ್ನಲ್ಲೇ, ಇದೀಗ ಕಳೆದ 8 ವರ್ಷಗಳಿಂದ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆ ಪುನಾರಾರಂಭದ ನಿರೀಕ್ಷೆಗಳು ಗರಿಗೆದರಲಾರಂಭಿಸಿವೆ. ಇದಕ್ಕೆ ಪೂರಕವೆಂಬಂತೆ ರಾಜ್ಯ ಸರ್ಕಾರವು ಕಾರ್ಖಾನೆ ಆರಂಭಕ್ಕೆ ಉತ್ಸುಕತೆ ತೋರಲಾರಂಭಿಸಿದೆ. ಸೆ. 6 ರಂದು ಬೆಳಿಗ್ಗೆ 11.30 ಕ್ಕೆ ಬೆಂಗಳೂರಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ, ಕಾರ್ಖಾನೆಯ ಸ್ಥಿತಿಗತಿಯ ಕುರಿತಂತೆ ಚರ್ಚಿಸಲು ಸಭೆ ಕರೆಯಲಾಗಿದೆ. ಇದು ಸಹಜವಾಗಿಯೇ ಕಾರ್ಮಿಕರ ವಲಯದಲ್ಲಿ ಹೊಸ ನಿರೀಕ್ಷೆಗಳು ಹುಟ್ಟು ಹಾಕುವಂತೆ ಮಾಡಿದೆ. ನಷ್ಟದ ಕಾರಣದಿಂದ ಎಂಪಿಎಂ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಇಲ್ಲಿನ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ರೂಪಿಸಿ ಸ್ವಯಂ ನಿವೃತ್ತಿ ನೀಡಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳ ಪುನಾರಾರಂಭಕ್ಕೆ ಕ್ರಮಕೈಗೊಳ್ಳುವ ಭರವಸೆಯನ್ನು ಆ ಪಕ್ಷದ ಮುಖಂಡರು ನೀಡಿದ್ದರು.