ಸಾಗರ –ಶಿವಮೊಗ್ಗ ಮಧ್ಯೆ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ!
– ಶಿಕಾರಿಪುರ : ಸ್ವಾಮಿ ಹೋಟೆಲಿನಲ್ಲಿ ಅಗ್ನಿ ಅವಘಡ..!
– ಶಿವಮೊಗ್ಗ: ಕಾರುಗಳ ನಡುವೆ ಡಿಕ್ಕಿ, ಇಬ್ವರು ಸಾವು
– ತೀರ್ಥಹಳ್ಳಿ: ಪ್ರೌಢಶಾಲೆಯಲ್ಲಿ ಭ್ರಷ್ಟಾಚಾರ!?
NAMMUR EXPRESS NEWS
ಶಿಕಾರಿಪುರ ಪಟ್ಟಣದ ಚನ್ನಕೇಶ್ವರ ನಗರದಲ್ಲಿರುವ ಸ್ವಾಮಿ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗ್ಯಾಸ್ ಸಿಲೆಂಡರ್ ಲೀಕೇಜ್ ನಿಂದ ಬೆಂಕಿ ಕಾಣಿಸಿಕೊಂಡು ಏಕಾಏಕಿ ದಗದಗನೆ ಬೆಂಕಿ ಉರಿದಿದೆ ತಕ್ಷಣ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದು ಕೂಡಲೇ ಅಗ್ನಿಶಾಮಕ ಸ್ಥಳಕ್ಕೆ ಮಾಹಿತಿ ನೀಡಿ ತಕ್ಷಣ ಅಗ್ನಿಶಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿ ಯಶಸ್ವಿಯಾಗಿದ್ದಾರೆ. ಅಡುಗೆ ಮನೆಯಲ್ಲಿ ಪಾತ್ರೆ ಇನ್ನಿತರ ವಸ್ತುಗಳು ಸುಟ್ಟು ಹೋಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಇಬ್ವರು ಸಾವು
ಶಿವಮೊಗ್ಗ: ಶಿವಮೊಗ್ಗದ ಜಾವಳ್ಳಿ ಬಳಿ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಅಪಘಾತದಲ್ಲಿ ಇಬ್ವರು ಸಾವು ಕಂಡಿದ್ದು ಎರಡೂ ಕಾರಿನ 7 ಜನರಿಗೆ ಗಾಯಗಳಾಗಿವೆ ಗಾಯಗೊಂಡವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಸಾವುಕಂಡವರನ್ನ ಇಲಿಯಾಜ್ ನಗರದ ವಾಸಿ ಅಪ್ತಾಬ್ ಮತ್ತು ಅವರ ಸೊಸೆ ಮದಿಹಾ ಎಂದು ಗುರುತಿಸಲಾಗಿದೆ. ಎರಡೂ ಕಾರಿನಲ್ಲಿದ್ದವರು ಗಾಯಗೊಂಡಿದ್ದು ಗಾಯಗೊಂಡವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಶಿವಮೊಗ್ಗದಿಂದ ಚನ್ನಗಿರಿ ಕಡೆ ಡ್ಯಾಟ್ಸನ್ ಕಾರಿನಲ್ಲಿ ಹೊರಟಿದ್ದ ಇಲಿಯಾಜ್ ನಗರದ ನಿವಾಸಿಗಳಿಗೆ ಚಿತ್ರದುರ್ಗದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ರಿಟ್ಜ್ ಕಾರಿಗೆ ಡಿಕ್ಕಿ ಹೊಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತೀರ್ಥಹಳ್ಳಿ ಪ್ರೌಢಶಾಲೆಯಲ್ಲಿ ಭ್ರಷ್ಟಾಚಾರ!?
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದ ಯು. ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಬರುವ ಪುಸ್ತಕಗಳನ್ನು ಚೀಲಗಳಲ್ಲಿ ತುಂಬಿಸಿ ಬೇರೆ ಕಡೆ ಯಾರಿಗೂ ತಿಳಿಯದ ಹಾಗೆ ಸಾಗಿಸಿದ್ದಾರೆ ಎಂಬ ಆರೋಪದ ಜೊತೆಗೆ ಫೋಟೋ ಸಮೇತ ಸಾರ್ವಜನಿಕರೊಬ್ಬರು ಕಳುಹಿಸಿದ್ದಾರೆ. ಈ ಬಗ್ಗೆ ಬಿಈಓ ಅವರನ್ನು ಕೇಳಿದಾಗ ಈಗಾಗಲೇ ಎಸ್ಟಿಎಂಸಿ ಅವರಿಗೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಸಾಗರ – ಶಿವಮೊಗ್ಗ ಮಧ್ಯೆ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ!
ಸಾಗರ : ಹಳಿ ಮೇಲೆ ವಿದ್ಯುತ್ ಕಂಬಿ ತುಂಡಾಗಿ ಬಿದ್ದಿದ್ದರಿಂದ ಕೆಲಕಾಲ ರೈಲು ಸಂಚಾರ ವ್ಯತ್ಯಯವಾಗಿತ್ತು. ಕೂಡಲೆ ರೈಲ್ವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಾಂತ್ರಿಕ ಸಮಸ್ಯೆ ಪರಿಹರಿಸಿದ್ದಾರೆ. ಆನಂದಪುರ ಸಮೀಪ ರೈಲ್ವೆ ಹಳಿ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ತಾಳಗುಪ್ಪ – ಬೆಂಗಳೂರು ಇಂಟರ್ಸಿಟಿ ರೈಲು ಸಿಬ್ಬಂದಿ ಇದನ್ನು ಗಮನಿಸಿ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು.
ಎರಡೂವರೆ ಗಂಟೆ ತಡ:
ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಬೆಂಗಳೂರು ಇಂಟರ್ಸಿಟಿ (ರೈಲು ಸಂಖ್ಯೆ 20652) ಬೆಳಗ್ಗೆ 6.05ಕ್ಕೆ ಆನಂದಪುರಕ್ಕೆ ತಲುಪಿದ್ದು, ಅಲ್ಲಿಯೇ ನಿಂತಿತ್ತು. ಹಳಿ ಮೇಲೆ ಬಿದ್ದಿದ ವಿದ್ಯುತ್ ತಂತಿ ತೆರವುಗೊಳಿಸಿ ರಿಪೇರಿ ಕಾರ್ಯ ನಡೆಸಲಾಯಿತು. ಎರಡೂವರೆಗೆ ಗಂಟೆ ಬಳಿಕ 8.39ಕ್ಕೆ ರೈಲು ಸಂಚಾರ ಆರಂಭಿಸಿದೆ. 7 ಗಂಟೆಗೆ ಶಿವಮೊಗ್ಗ ನಿಲ್ದಾಣ ತಲುಪಬೇಕಿದ್ದ ರೈಲು 10 ಗಂಟೆ ಹೊತ್ತಿಗೆ ತಲುಪಿದೆ. ತಾಳಗುಪ್ಪದವರೆಗೆ ರೈಲ್ವೆ ಲೇನ್ ವಿದ್ಯುದೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಇದರ ವಯರ್ ತುಂಡಾಗಿ ರೈಲ್ವೆ ಲೇನ್ ಮೇಲೆ ಬಿದ್ದಿತ್ತು ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆ ಸಿಬ್ಬಂದಿ ರಿಪೇರಿ ಕಾರ್ಯ ಕೈಗೊಂಡು ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.