ಬಾವಿ ತೆಗೆಯುವಾಗ ತಲೆ ಮೇಲೆ ಕಲ್ಲು ಬಿದ್ದು ಸಾವು..!
– ಸಾಗರ ಪಟ್ಟಣದ ನೆಹರು ನಗರದ ಅರಳಿಕಟ್ಟೆ ಬಳಿ ನಡೆದ ಘಟನೆ
– ಸಾಗರ: ಕುಡಿಯಲು ನೀರು ಕೇಳಿ ಅಪ್ರಾಪ್ತ ಬಾಲಕಿ ರೇಪ್!
– ಶಿವಮೊಗ್ಗ: ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರು ಬಂಧನ
– ಅಪ್ರಾಪ್ತ ಬೈಕ್ ಸವಾರನಿಗೆ 25 ಸಾವಿರ ರೂ. ದಂಡ!
NAMMUR EXPRESS NEWS
ಸಾಗರ : ಸಾಗರ ಪಟ್ಟಣದ ನೆಹರು ನಗರದ ಅರಳಿಕಟ್ಟೆ ಬಳಿ ಹೊಸ ಬಾವಿಯ ಕಾಮಗಾರಿಯ ವೇಳೆ ಮೂವರು ಕಾರ್ಮಿಕರ ಪೈಕಿ ಬಾವಿಯೊಳಗೆ ಇಳಿದಿದ್ದ ಓರ್ವ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಗುರುವಾರ ಸಂಜೆ ವೇಳೆ ನಡೆದಿದೆ.
ಮೃತಪಟ್ಟವರನ್ನು ಮೋಹನ (55) ಕಂಬಳಿಕೊಪ್ಪದ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ, ಪೊಲೀಸರು ಧಾವಿಸಿದ್ದು ಮೃತ ದೇಹವನ್ನು ಹೊರತೆಗೆಯಲಾಗಿದೆ.ಮೃತ ದೇಹವನ್ನು ಸಾಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಕುಡಿಯಲು ನೀರು ಕೇಳಿ ಅಪ್ರಾಪ್ತ ಬಾಲಕಿ ರೇಪ್!
ಸಾಗರ : ಅಪ್ರಾಪ್ತ ಮೇಲೆ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆ ಗ್ರಾಮವೊಂದರ 24 ವರ್ಷದ ಯುವಕನ ವಿರುದ್ಧ ಪೋಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಯುವಕ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ಡಿವೈಎಸ್ಪಿ ಕಚೇರಿಗೆ ತೆರಳಿ ತಕ್ಷಣ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಕುಡಿಯಲು ನೀರು ಕೇಳಿ ದುಷ್ಕೃತ್ಯ ಮಂಗಳವಾರ ಯಾರೂ ಇಲ್ಲದ ವೇಳೆ ಅಪ್ರಾಪ್ತ ಮನೆ ಬಳಿ ತೆರಳಿದ್ದ ಅದೇ ಗ್ರಾಮದ ಯುವಕ ಕುಡಿಯಲು ನೀರು ಕೇಳಿದ್ದಾನೆ. ಬಾಲಕಿ ನೀರು ತರಲು ಒಳಗೆ ಹೋದಾಗ ಹಿಂದಿನಿಂದ ಹೋಗಿ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ಕೂಗಿಕೊಂಡಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಆರೋಪಿ ಬಂಧನಕ್ಕೆ ಆಗ್ರಹ
ಇನ್ನು ಘಟನೆ ಖಂಡಿಸಿ ಗ್ರಾಮಸ್ಥರು ಸಾಗರ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿದ್ದರು. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರಿಗೆ ಮನವಿ ಸಲ್ಲಿಸಿದ್ದು, ಆರೋಪಿಯನ್ನು ತಕ್ಷಣ ಬಂದಿಸುವಂತೆ ಆಗ್ರಹಿಸಿದರು.
ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರು ಬಂಧನ
ಶಿವಮೊಗ್ಗ: ನಾಲೆಯ ದಂಡೆಯ ಮೇಲೆ ಶ್ರೀಗಂಧವನ್ನ ಸಾಗಿಸುತ್ತಿದ್ದ ಇಬ್ಬರನ್ನ ಅರಣ್ಯ ಇಲಾಖೆಯವರು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಶಿವಮೊಗ್ಗ ವೃತ್ತದ ಲಕ್ಕವಳ್ಳಿ ವಲಯದ ವ್ಯಾಪ್ತಿಯ ಜೋಡಿ ಕೋಡಿಹಳ್ಳಿ ಗ್ರಾಮದ ಬಳಿಯ ಭದ್ರಾ ಮುಖ್ಯ ನಾಲೆಯ ದಂಡೆ ಮೇಲೆ ರಾಮು ಬಿನ್ ಕೃಷ್ಣ ಸ್ವಾಮಿ, ಕರಕುಚ್ಚಿ ಗ್ರಾಮವಾಸಿ ಹಾಗೂ ಇಲಿಯಾಜ್ ಬಿನ್ ಬಕ್ಷಿ ಸಾಬ್, ಕರಕುಚ್ಚಿ ಗ್ರಾಮವಾಸಿ ಇವರುಗಳು ಅಕ್ರಮವಾಗಿ ಶ್ರೀಗಂಧವನ್ನು ಸಾಗಿಸುತ್ತಿರುವಾಗ ಬಂಧಿಸಲಾಗಿದೆ. 12.1 ಕೆಜಿ ಶ್ರೀಗಂಧದ ಚಿಕ್ಕೆಗಳನ್ನು ಹಾಗೂ ಸಾಗಿಸಲು ಉಪಯೋಗಿಸಿದ ಒಂದು ಪಲ್ಸರ್ ಬೈಕ್ ಅನ್ನು ಅಮಾನತುಪಡಿಸಿಕೊಳ್ಳಲಾಗಿದೆ, ಆಸಾಮಿಗಳ ಮೇಲೆ ಅರಣ್ಯ ಅಪರಾಧ ಮೊಕದ್ದಮೆ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.
ಅಪ್ರಾಪ್ತ ಬೈಕ್ ಸವಾರನಿಗೆ 25 ಸಾವಿರ ರೂ. ದಂಡ!
ಶಿವಮೊಗ್ಗ : ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮದ್ಯ ಸೇವಿಸಿ ಬೈಕ್ ಚಲಾಯಿಸಿದ ವ್ಯಕ್ತಿಗೆ ಶಿವಮೊಗ್ಗ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ. ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆ ಪಿಎಸ್ಐ ತಿರುಮಲೇಶ್ ದ್ವಿಚಕ್ರ ವಾಹನ ಸವಾರನನ್ನು ತಡೆದು ತಪಾಸಣೆ ಮಾಡಿದ್ದಾರೆ. ಈ ವೇಳೆ ಆತ ಮದ್ಯ ಸೇವನೆ ಮಾಡಿರುವುದು ಗೊತ್ತಾಗಿದೆ. ಆತನ ಬಳಿ ಚಾಲನ ಪರವಾನಗಿ ಇರಲಿಲ್ಲ. ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಚಂದ್ರು ಎಂಬಾತನಿಗೆ 25 ಸಾವಿರ ರೂ. ದಂಡ ವಿಧಿಸಿದೆ.