ಚಿತ್ರದುರ್ಗದಲ್ಲಿ ಮುಂಜಾನೆ ಅಪಘಾತಕ್ಕೆ ನಾಲ್ವರು ಬಲಿ!
– ಹಿರಿಯೂರಲ್ಲಿ ಬಸ್,ಲಾರಿ ಡಿಕ್ಕಿಯಾಗಿ ನಾಲ್ವರ ಸಾವು
– ಶಿವಮೊಗ್ಗ: ಚಲಿಸುತಿದ್ದ ಕಾರಿನಲ್ಲಿ ಬೆಂಕಿ: ಬೆಂಕಿಗಾಹುತಿ
– ಶಿವಮೊಗ್ಗದ ಮೊದಲ ಮಹಿಳಾ ನ್ಯಾಯವಾದಿ ಇನ್ನಿಲ್ಲ
NAMMUR EXPRESS NEWS
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಸೊಮವಾರ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿ ಡಿಕ್ಕಿಯಾಗಿದ್ದು, ಬಸ್ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಹತ್ತಾರು ಜನ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಬಳಿ ಬೆಳಗಿನ ಜಾವ 3 ಗಂಟೆಗೆ ಅಪಘಾತ ಸಂಭವಿಸಿದೆ. ರಾಯಚೂರು ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಹಾಗೂ ಲಾರಿ ಡಿಕ್ಕಿಯಾಗಿದೆ. ಮಸ್ಕಿ ಮೂಲದ ರಮೇಶ್ ಹಾಗೂ ಬೆಂಗಳೂರು ಮೂಲದ ಪಾರ್ವತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಬಸ್ನಲ್ಲಿದ್ದ ಕೆಲವರಿಗೆ ಗಂಭೀರವಾಗಿ ಗಾಯಗಳಾದರೆ, 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಹಿರಿಯೂರು ಹಾಗೂ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸಂಭವಿಸುತ್ತಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ವಾರದ ಹಿಂದಷ್ಟೇ ಚಿತ್ರದುರ್ಗದ ಮಲ್ಲಾಪುರ ಬಳಿ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಕಾರು- ಲಾರಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಬಂದು ಬಂದು ಡಿಕ್ಕಿ ಹೊಡೆದ ಕಾರಣ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಘಟನೆಯಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದರು.
ಚಲಿಸುತಿದ್ದ ಕಾರಿನಲ್ಲಿ ಬೆಂಕಿ: ಕಾರು ಬೆಂಕಿಗಾಹುತಿ
ಶಿವಮೊಗ್ಗ : ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕಾರು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಂತೆ ಡಸ್ಟರ್ ಕಾರು ಧಗ ಧಗನೆ ಹೊತ್ತು ಉರಿದಿರುವ ಘಟನೆ ಭಾನುವಾರ ಮಧ್ಯಾಹ್ನ ಶಿವಮೊಗ್ಗದ ಹೊರವಲಯದಲ್ಲಿ ಸಂಭವಿಸಿದೆ. ನಗರದ ಮುದ್ದಿನಕೊಪ್ಪದ ಬಳಿ ಭದ್ರಾವತಿಯ ಸಿದ್ದಾಪುರದ ಕಿರಣ್ ಕುಮಾರ್ ಎಂಬುವರ ಡಸ್ಟರ್ ಕಾರು ಕೆಎ 25 ಎಂ ಎ 1169 ಕ್ರಮ ಸಂಖ್ಯೆಯ ಡಸ್ಟರ್ ಕಾರಿನಲ್ಲಿ ಮುಂದಿನ ಎಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ರಸ್ತೆ ಬದಿಗೆ ಕಾರು ನಿಲ್ಲಿಸಿ ಕಿರಣ್ ಕುಮಾರ್ ಮುಂದಿನ ಬ್ಯಾನೆಟ್ ತೆಗೆದಿದ್ದಾರೆ. ಬ್ಯಾನೆಟ್ ತೆಗೆಯುತ್ತಿದ್ದಂತೆ ಬೆಂಕಿ ಕಾರನ್ನು ಸಂಪೂರ್ಣ ಆವರಿಸಿಕೊಂಡಿದೆ. ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸಿದ್ದಾರೆ . ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಶಿವಮೊಗ್ಗದ ಮೊದಲ ಮಹಿಳಾ ನ್ಯಾಯವಾದಿ ಇನ್ನಿಲ್ಲ,
ಶಿವಮೊಗ್ಗ : ಹಿರಿಯ ನ್ಯಾಯವಾದಿ ಸಾಮಾಜಿಕ ಹೋರಾಟಗಾರ್ತಿ ಮಂಜುಳಾ ದೇವಿ ಭಾನುವಾರ ನಿಧನರಾದರು.
ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಮಂಜುಳಾ ದೇವಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವಿವಾಹಿತರಾಗಿದ್ದ ಮಂಜುಳಾದೇವಿ ಶಾಲಾ ಗೇಣಿ ಜಮೀನು ಹೋರಾಟ ಸೇರಿ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಚಳವಳಿಗಳ ಜೊತೆಗೆ ವಕೀಲಿ ವೃತ್ತಿಯನ್ನು ಮುಂದುವರೆಸಿದ್ದರು. ಜಿಲ್ಲೆಯ ಹಲವು ಹೆಸರಾಂತ ವಕೀಲರು ಇವರ ಗರಡಿಯಲ್ಲಿ ಕಲಿತಿದ್ದಾರೆ. ರಾಜಕಾರಣದಲ್ಲು ತೊಡಗಿದ್ದ ಮಂಜುಳಾ ದೇವಿ ಅವರು ಶಿವಮೊಗ್ಗ ವಿಧಾನಸಭೆ ಚುನಾವಣೆಗು ಸ್ಪರ್ಧೆ ಮಾಡಿದ್ದರು. ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾದಳ ಸಂಘಟನೆ ಮಾಡಿದ್ದರು ಎಂದು ವಕೀಲ ಕೆ.ಪಿ.ಶ್ರೀಪಾಲ್ ಸಾಮಾಜಿಕ ಜಾಲತಾಣದಲ್ಲಿ ಮಂಜುಳಾದೇವಿ ಅವರನ್ನು ಸ್ಮರಿಸಿದ್ದಾರೆ. ಭಾನುವಾರ ಮಂಜುಳಾದೇವಿ ಅವರು ಕೊನೆಯುಸಿರೆಳೆದಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.