ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿಗಳಿಗೆ ವಾರ್ನಿಂಗ್!
– ಗಣೇಶ ಹಬ್ಬ, ಈದ್ ಮಿಲಾದ್ ಹಿನ್ನೆಲೆ ಎಚ್ಚರಿಕೆ
– ಹೊಳೆಹೊನ್ನೂರು: ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಕರಡಿ ದಾಳಿ!
– ಹೊಸನಗರ : ಕಾರು ಪಲ್ಟಿ, ಇಬ್ಬರು ಮಹಿಳಾ ಪ್ರಯಾಣಿಕರಿಗೆ ಗಾಯ
– ಬರಪೀಡಿತ ಜಿಲ್ಲೆಯಾಗಿ ಶಿವಮೊಗ್ಗ ಘೋಷಣೆ
NAMMUR EXPRESS NEWS
ಶಿವಮೊಗ್ಗ : ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಯ್ದುಕೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗಷ್ಟೆ ಜಿಲ್ಲೆಯಾದ್ಯಂತ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಇದರ ಬೆನ್ನಲ್ಲೇ ಬುಧವಾರ ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿ ಶೀಟರ್ ಗಳ ಪರೇಡ್ ನಡೆಸಲಾಗಿದೆ. ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಕರಡಿ ದಾಳಿ!
ಹೊಳೆಹೊನ್ನೂರು ಅಂಗಡಿಯೊಂದರ ಕಟ್ಟೆ ಮೇಲೆ ಕುಳಿತಿದ್ದ ಇಬ್ಬರು ಗ್ರಾಮಸ್ಥರ ಮೇಲೆ ಕರಡಿ ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲಿದವರು ಜೋರಾಗಿ ಕೂಗಾಡಿದ್ದರಿಂದ ಕರಡಿ ಓಡಿ ಹೋಗಿ ಸಮೀಪದ ಅಡಿಕೆ ತೋಟದಲ್ಲಿ ಮರೆಯಾಗಿದೆ. ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರು ಪಲ್ಟಿ, ಇಬ್ಬರು ಮಹಿಳಾ ಪ್ರಯಾಣಿಕರಿಗೆ ಗಾಯ
ಹೊಸನಗರ ತಾಲೂಕು ರಿಪ್ಪನ್ಪೇಟೆಯ ಬೆನವಳ್ಳಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಹೊಸನಗರದಿಂದ ಶಿವಮೊಗ್ಗಕ್ಕೆ ತೆರಳುತಿದ್ದ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ದೂನ ಹಾಗೂ ಬೆನವಳ್ಳಿ ನಡುವೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಉರುಳಿಬಿದ್ದಿದೆ. ಕಾರಿನಲ್ಲಿ ಹೊಸನಗರ ಮೂಲದ ಕುಟುಂಬವೊಂದರ ಐವರು ಪ್ರಯಾಣಿಸುತಿದ್ದರು ಇಬ್ಬರು ಮಹಿಳಾ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಉಳಿದವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಬರಪೀಡಿತ ಜಿಲ್ಲೆಯಾಗಿ ಶಿವಮೊಗ್ಗ ಘೋಷಣೆ
ಬೆಂಗಳೂರಿನಲ್ಲಿ ಸಭೆ ನಡೆದ ಕೈಗೊಂಡ ತೀರ್ಮಾನದಂತೆ 236 ತಾಲೂಕುಗಳ ಪೈಕಿ 195 ತಾಲೂಕುಗಳನ್ನ ರಾಜ್ಯ ಸರ್ಕಾರ ಬರ ತಾಲೂಕುಗಳು ಎಂದು ಘೋಷಿಸಿದೆ. ಇದರಲ್ಲಿ ಶಿವಮೊಗ್ಗದ 7 ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಸೇರಿಸಲಾಗಿದೆ.
ಕೇಂದ್ರ ಸರ್ಕಾರ ಬರ ನಿಯಮಾವಳಿ 2020 ರ ಪ್ರಕಾರ 34 ತಾಲೂಕುಗಳಲ್ಲಿ ಬರ ನಿಯಮಾವಳಿಗಳು ಹೊಂದಿಕೆಯಾಗದ ಕಾರಣ 195 ಬರ ಪೀಡಿತ ತಾಲೂಕುಗಳಲ್ಲಿ 161 ತಾಲೂಕು ತೀವ್ರ ಬರವೆಂದು 34 ತಾಲೂಲುಗಳಲ್ಲಿ ಸಾಧಾರಣ ಬರವೆಂದು ಪರಿಗಣಿಸಲಾಗಿದೆ. ಮಾಹಿತಿಯ ಪ್ರಕಾರ ಶಿವಮೊಗ್ಗದ 7 ತಾಲೂಕುಗಳು ತೀವ್ರ ಬರದ ಪಟ್ಟಿಯಲ್ಲಿದ್ದು ಮುಂದಿನ 6 ತಿಂಗಳ ಪ್ರಕಾರ ಬರ ಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ.