ಮ್ಯಾಟ್ರಿಮೋನಿ ಹುಡುಗಿ ಫೋಟೋಗೆ ಮನಸೋತು 99 ಲಕ್ಷ ಕಳೆದುಕೊಂಡ!
– ಅಪ್ಪ ಉದ್ಯಮಿ ಅಂತ ಅಕೌಂಟಿಗೆ ಹಣ ಹಾಕಿಸಿಕೊಂಡು ಮೋಸ
– ಹುಡುಗಿ ಹೆಸರಲ್ಲಿ ಮೋಸ ಮಾಡ್ತಾರೆ ಹುಷಾರ್!
NAMMUR EXPRESS NEWS
ಶಿವಮೊಗ್ಗ: ಮ್ಯಾಟ್ರಿಮೋನಿ ಹುಡುಗಿ ಫೋಟೋಗೆ ಮನಸೋತು 99 ಲಕ್ಷ ಕಳೆದುಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮ್ಯಾಟ್ರಿಮೋನಿ ಆಪ್ ಮೂಲಕ ಪರಿಚಯ ಆದ ಹುಡುಗಿ ಹೆಸರಿನ ವಂಚಕರು ತಮ್ಮನ್ನು ಸ್ವಪ್ನ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಅಪ್ಪ ಉದ್ಯಮಿ ಅಂತ ಅಕೌಂಟಿಗೆ ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ.
ಹುಡುಗಿ ಹೆಸರಲ್ಲಿ ಮೋಸ ಮಾಡ್ತಾರೆ ಹುಷಾರ್!
ಶಿವಮೊಗ್ಗದ ಯುವಕರೊಬ್ಬರಿಗೆ ಹುಡುಗಿ ಹೆಸರಿನಲ್ಲಿ 99 ಲಕ್ಷ ರೂಪಾಯಿ ವಂಚನೆ ಮಾಡಿದ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ. ಶಿವಮೊಗ್ಗ ನಿವಾಸಿ ಯುವಕ ಏಪ್ರಿಲ್ ತಿಂಗಳಿನಲ್ಲಿ ಮದುವೆ ಮ್ಯಾಟ್ರಿಮೋನಿ ಆ್ಯಪ್ವೊಂದರಲ್ಲಿ ಒಬ್ಬಾಕೆಯ ಪ್ರೊಫೈಲ್ ನೋಡಿ ಅವರೊಂದಿಗೆ ಚಾಟ್ ಆರಂಭಿಸಿದ್ದರು. ಪರಸ್ಪರ ಪರಿಚಯ ಮಾಡಿಕೊಂಡು ಮಾತುಕತೆ ಮುಂದುವರಿಸಿದ್ದಾರೆ. ಈ ನಡುವೆ ಯುವತಿಯು ತನ್ನ ಹೆಸರನ್ನ ಸ್ವಪ್ನ ಅಂತ ತಿಳಿಸಿ ,ತಾನು ಲಂಡನ್ನಲ್ಲಿ ನನ್ನ ಚಿಕ್ಕಪ್ಪನ ಜೊತೆ ವಾಸ ಆಗಿದ್ದು, ತಮ್ಮ ಚಿಕ್ಕಪ್ಪ ವಾಲ್ ಸ್ಟ್ರೀಟ್ ನಲ್ಲಿ ಮಾರ್ಕೆಟ್ ಅನಲಿಸ್ಟ್ ಆಗಿದ್ದಾರೆ, ಅಲ್ಲಿ ಟ್ರೇಡಿಂಗ್ ಮಾಡಿ ಲಾಭ ಗಳಿಸ್ತಿದ್ದೇನೆ ಎಂದು ವಿವರಿಸಿದ್ದಾಳೆ. ಮೇಲಾಗಿ ನೀವು ದುಡ್ಡು ಮಾಡಬೇಕು ಅಂದರೆ ಲಿಂಕ್ ಕಳಿಸ್ತೇನೆ ಜಾಯಿನ್ ಆಗಿ ಎಂದಿದ್ದಾಳೆ.
ಇದನ್ನ ನಂಬಿದ ಯುವಕ ಯುವತಿ ಹೇಳಿದ ಲಿಂಕ್ ಕ್ಲಿಕ್ ಮಾಡಿ ಆ್ಯಪ್ ಡೌನ್ ಮಾಡಿ, ಪ್ರೊಸಿಜರ್ ಮುಗಿಸಿದ್ದಾನೆ. ಆನಂತರ ಆ್ಯಪ್ನಲ್ಲಿ ಸೂಚಿಸಿದಂತೆ ವಿವಿಧ ಹಂತಗಳಲ್ಲಿ ಬರೋಬ್ಬರಿ 99,03,000/-ರೂಪಾಯಿಯನ್ನು ಇನ್ವೆಸ್ಟ್ ಮಾಡಿದ್ದಾರೆ. ಆನಂತರ ಯುವತಿ ಹಾಗೂ ಹಾಕಿದ ಹಣ ಎರಡು ಕೂಡ ಮೋಸ ಎಂಬುದು ಗೊತ್ತಾಗಿದೆ. ತಕ್ಷಣವೇ ಯುವಕ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.