ಮಧು ಬಂಗಾರಪ್ಪ ಜನತಾ ದರ್ಶನ!
– ಸೆ.25ಕ್ಕೆ ಉಸ್ತುವಾರಿ ಸಚಿವರಿಂದ ಅಹವಾಲು ಸ್ವೀಕಾರ
– ಶಿವಮೊಗ್ಗ ಜಿಲ್ಲೆಯ ಜನರಿಗಗೆ ಅವಕಾಶ
NAMMUR EXPRESS NEWS
ಶಿವಮೊಗ್ಗ ಜಿಲ್ಲೆಯ ಜನರ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 25ರಂದು ಜಿಲ್ಲಾ ಮಟ್ಟದ ಜನತಾ ದರ್ಶನ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂದು ಬೆಳಗ್ಗೆ 10.30ರಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರ ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಆಲಿಸಲಿದ್ದಾರೆಂದು ಜಿಲ್ಲಾ ಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ನಾಗರೀಕರು ರಾಜಧಾನಿ ಬೆಂಗಳೂರಿಗೆ ಹೋಗಿ ಹಲವಾರು ರೀತಿಯ ಸಮಸ್ಯೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಹವಾಲುಗಳನ್ನು ಸಲ್ಲಿಸುತ್ತಿರುವುದನ್ನು ನಿಯಂತ್ರಿಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರದ ಆಶಯದಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದ ಅವರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ಅಹವಾಲುಗಳಿಗೆ, ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಿದ್ದಾರೆ.
ಮುಖ್ಯಮಂತ್ರಿಗಳು ನಿರ್ದೇಶನದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮ ನಡೆಯುವ ದಿನದಂದು ಬೆಳಿಗ್ಗೆ 9.30ರಿಂದ ನಿಗಧಿಪಡಿಸಿದ ಸ್ಥಳದಲ್ಲಿ ಖುದ್ದು ಹಾಜರಿದ್ದು ಸಾರ್ವಜನಿಕರು ತಮ್ಮ ಅವಹಾಲುಗಳನ್ನು ಸಲ್ಲಿಸಬಹುದಾಗಿದೆ ಎಂದಿದ್ದಾರೆ.
ಸಾರ್ವಜನಿಕವಾಗಿ ಅಹವಾಲು ಸಲ್ಲಿಸುವವರು ಗರಿಷ್ಟ ಇಬ್ಬರಿಗೆ ಅವಕಾಶವನ್ನು ನೀಡಲಾಗುವುದು ಹಾಗೂ ಅರ್ಜಿ ನೋಂದಾಯಿಸಿದ ನಂತರ ಟೋಕನ್ಗಳನ್ನು ಪಡೆದುಕೊಳ್ಳಬೇಕು. ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಕೆಯಾದ ನಂತರ ಉಳಿಕೆಯವರಿಗೆ ಅವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾ ಕಾರಿ ಡಾ. ಆರ್.ಸೆಲ್ವಮಣಿ ಅವರು ಮನವಿ ಮಾಡಿದ್ದಾರೆ.