ಡಿಕೆಶಿ ಅವಹೇಳನ: ಈಶ್ವರಪ್ಪ ವಿರುದ್ಧ ದೂರು!
– ಡಿಕೆ ಶಿವಕುಮಾರ್ ಅಭಿಮಾನಿ ಬಳಗದಿಂದ ಎಸ್ಪಿಗೆ ದೂರು
– ಸಾಗರ: ಅಪ್ರಾಪ್ತರಿಗೆ ಸಿಗರೇಟ್ ಮಾರಾಟ: ಅಂಗಡಿ ಮೇಲೆ ಪೊಲೀಸರ ದಾಳಿ
– ಸೊರಬ: ಅರೆಕಾಲಿಕ ಉಪನ್ಯಾಸಕರ ಅರ್ಜಿ ಆಹ್ವಾನ
– ಭದ್ರಾವತಿ: ರೀಲ್ಸ್ ಮಾಡಲು ಹೋಗಿ ಪೊಲೀಸ್ ಅತಿಥಿಯಾದರು!
– ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಮಲಗಿದ್ದವನ ಮೊಬೈಲ್, ಹಣ ಮಾಯ!
NAMMUR EXPRESS NEWS
ಶಿವಮೊಗ್ಗ: ಡಿ.ಕೆ ಶಿವಕುಮಾರ್ ವಿರುದ್ಧ ಅವಹೇಳನ ಕಾರಿ ಹೇಳಿಕೆ ನೀಡಿದ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗ ಜಿಲ್ಲಾ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಎಸ್ .ಪಿ.ಕಚೇರಿಗೆ ದೂರು ನೀಡಲಾಗಿದೆ. ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷರಾದ ಆರ್.ಮೋಹನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಎಸ್ ಪಿ ಕಚೇರಿಗೆ ದೂರು ಕೊಡಲಾಯಿತು. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ನಾಗೇಶ್ ಮೊಘವೀರ್ ಮೇಳಿಗೆ, ಹೊಸನಗರ ಅಧ್ಯಕ್ಷರಾದ ವಿಶ್ವನಾಥ ಕೌರಿ, ಪ್ರಮುಖರಾದ ಮಹೇಂದ್ರ ಕುಂಟುವಳ್ಳಿ ಹಾಗೂ ಸಂತೋಷ್ ಕಂತುಗದ್ದೆ,ಸುಧಾಕರ್ ಕಂತುಗದ್ದೆ ಇನ್ನು ಮುಂತಾದ ಗಣ್ಯರ ಸಮ್ಮುಖದಲ್ಲಿ ದೂರು ನೀಡಲಾಯಿತು.
ಅಪ್ರಾಪ್ತರಿಗೆ ಸಿಗರೇಟ್ ಮಾರಾಟ: ಅಂಗಡಿ ಮೇಲೆ ಪೊಲೀಸರ ದಾಳಿ
ಸಾಗರ ನಗರದಲ್ಲಿ ಅಪ್ರಾಪ್ತ ಯುವಕರಿಗೆ ಸಿಗರೇಟ್ ಮಾರುತಿದ್ದ ಅಂಗಡಿಗಳ ಮೇಲೆ ಪೋಲಿಸ್ ಇಲಾಖೆ ದಾಳಿ ನಡೆಸಿದೆ.
ಸಾಗರ ನಗರದ ಹೊಸ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ಜ್ಯೂಸ್ ಸೆಂಟರ್ ನಲ್ಲಿ ಹದಿನೆಂಟು ವರ್ಷಕ್ಕಿಂತ ಕಡಿಮೆ ಯುವಕರಿಗೆ ಸಿಗರೇಟ್ ಮಾರುತ್ತಿದ್ದ ಅಂಗಡಿ ಮಾಲಿಕನ ಮೇಲೆ ಸಾಗರದ ಡಿವೈ.ಎಸ್.ಪಿ ಗೋಪಾಲಕೃಷ್ಣ ಟಿ ನಾಯ್ಕ್ ನೇತೃತ್ವದಲ್ಲಿ ದಾಳಿ ಮಾಡಿ ಮಾಲಿಕನ ಮೇಲೆ ಪ್ರಕರಣ ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ಸೊರಬ: ಅರೆಕಾಲಿಕ ಉಪನ್ಯಾಸಕರ ಅರ್ಜಿ ಆಹ್ವಾನ
ಸೊರಬದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ವತಿಯಿಂದ 2023-24 ನೇ ಶೈಕ್ಷಣಿಕ ಸಾಲಿಗೆ ಕೆಳಕಂಡ ವಿಭಾಗಗಳಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಅರೆಕಾಲಿಕ ಉಪನ್ಯಾಸಕರ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಯಾ ವಿಭಾಗಗಳ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಗಳನ್ನು ನಡೆಸಲು ಅರೆಕಾಲಿಕ ಉಪನ್ಯಾಸಕರುಗಳ ಅವಶ್ಯಕತೆ ಇರುವುದರಿಂದ ಇ ಮತ್ತು ಸಿ ವಿಭಾಗ, ಆಟೋಮೊಬೈಲ್ ವಿಭಾಗ, ಸಿ.ಎ ವಿಭಾಗ, ಮೆಕ್ಯಾನಿಕಲ್ ವಿಭಾಗಗಳಿಗೆ ಬಿ.ಇ ಇನ್ ಇ ಮತ್ತು ಸಿ, ಬಿ.ಇ ಇನ್ ಆಟೋಮೊಬೈಲ್,ಬಿ.ಇ ಇನ್ ಸಿ.ಎಸ್, ಬಿ.ಇ ಇನ್ ಮೆಕ್ಯಾನಿಕ್ ಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಅಂಕಪಟ್ಟಿ, ಪ್ರಮಾಣಪತ್ರ, ರೆಸ್ಯೂಮ್, ಫೋಟೊ ಅಗತ್ಯ ದಾಖಲೆಗಳೊಂದಿಗೆ ಸೊರಬ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರ ಕಚೇರಿಗೆ ಸಲ್ಲಿಸತಕ್ಕದ್ದು ಎಂದು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೇಸ್ ಬುಕ್ ರೀಲ್ಸ್ ಮಾಡಲು ಹೋಗಿ ತಗಲಾಕೊಂಡ ಯುವಕರು!
ಭದ್ರಾವತಿ: ಗಣಪತಿ ಪ್ರತಿಷ್ಠಾಪನ ವೇಳೆ ಆಯುಧಗಳನ್ನ ತೋರಿಸಿ ಕುಣಿದು ಕುಪ್ಪಳಿಸಿದ್ದ ಯುವಕರಿಬ್ಬರನ್ನ ಪೊಲೀಸರು ಠಾಣೆಗೆ ತಂದು ವಾರ್ನಿಂಗ್ ಕೊಟ್ಟು ಕಳುಹಿಸಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಫೇಸ್ ಬುಕ್ ನಲ್ಲಿ ಮಿಂಚಿಕೊಳ್ಳಲು ಹೋಗಿದ್ದ ಯುವಕರು ಪೊಲೀಸರ ಅತಿಥಿಯಾಗಿ ಹೊರಬಂದಿದ್ದಾರೆ. ಗಣಪತಿ ಹಬ್ಬದ ದಿನದಂದು ಗಣಪತಿ ಪ್ರತಿಷ್ಠಾಪನೆಯ ವೇಳೆ ಗಣಪತಿಯನ್ನ ಮೆರವಣಿಗೆಯಲ್ಲಿ ತರುವಾಗ ಅರಕೆರೆ ಗ್ರಾಮದ ಯುವಕರು ಆಯುಧ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮಾಡಿರುವುದು ಡೊಳ್ಳು ನಾದಕ್ಕೆ. ಆದರೆ ಈ ವೀಡಿಯೋವನ್ನ ಫೇಸ್ ಬುಕ್ ರೀಲ್ ಗೆ ಹಾಕಿಕೊಂಡು ತಗಲಾಕಿಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಆಯುಧ ಹಿಡಿದು ಕುಳಿದು ಕುಪ್ಪಳಿಸಿದ ಯುವಕರು ಡಾಲಿ ದನಂಜಯ್ ಅಭಿನಯದ “ರೌಡಿಗಳು ನಾವು ರೌಡಿಗಳು” ಎಂಬ ಸಿನಿಮಾ ಹಾಡು ಮಿಕ್ಸ್ ಮಾಡಿ ಫೇಸ್ ಬುಕ್ ರೀಲ್ಸ್ ಗೆ ಅಪ್ಲೋಡ್ ಮಾಡಿದ್ದಾರೆ. ಎರಡು ದಿನ ತಣ್ಣಗೆ ಕುಳಿತಿದ್ದ ಯುವಕರು ಫೇಸ್ ಬುಕ್ ರೀಲ್ಸ್ ನಲ್ಲಿ ಮಿಂಚಿಕೊಳ್ಳಲು ಮುಂದಾಗಿದ್ದಾರೆ. ಇವತ್ತು ಅಪ್ಲೋಡ್ ಆಗುತ್ತಿದ್ದಂತೆ ಅಲರ್ಟ್ ಆದ ಹೊಳೆಹೊನ್ನೂರು ಪೊಲೀಸರು ತಲವಾರು ಹಿಡಿದು ಕುಪ್ಪಳಿಸಿದ ಯುವಕರನ್ನ ಠಾಣೆಗೆ ತಂದು ಕೂರಿಸಿ ಎಚ್ಚರಿಸಿ ಕಳುಹಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಮಲಗಿದ್ದವನ ಮೊಬೈಲ್, ಹಣ ಮಾಯ!
ಶಿವಮೊಗ್ಗ : ಬಸ್ಸಿಗೆ ಕಾಯುತ್ತ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯ ಜೇಬಿನಲ್ಲಿದ್ದ ಮೊಬೈಲ್ ಮತ್ತು ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ನ್ಯಾಮತಿಯ ಭರತ್ ಎಂಬುವವರು ಮಂಗಳೂರಿಗೆ ತೆರಳಲು ತಮ್ಮೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ರಾತ್ರಿ 12 ಗಂಟೆಗೆ ಬಸ್ ಬರಲಿದೆ ಎಂದು ನಿಲ್ದಾಣದಲ್ಲಿಯೇ ಮಲಗಿದ್ದರು. ರಾತ್ರಿ 11.30ಕ್ಕೆ ಎಚ್ಚರವಾದಾಗ ಜೇಬಿನಲ್ಲಿದ್ದ 11 ಸಾವಿರ ರೂ. ಮೌಲ್ಯದ ವೀವೋ ಮೊಬೈಲ್ ಮತ್ತು 900 ರೂ. ನಗದು ಕಳ್ಳತನವಾಗಿತ್ತು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.