ವಿದ್ಯುತ್ ಕಂಬದ ಮೇಲೆ ಲೈನ್ ಮ್ಯಾನ್ ಸಾವು!
– ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ನಡೆದ ದುರಂತ
– ಸಾಗರ: ಲಕ್ಷ್ಮಿದೇವಿ ವಿಗ್ರಹ ಹಾನಿಗೊಳಿಸಿ ನಿಧಿ ಶೋಧ: ಇಬ್ಬರು ಅರೆಸ್ಟ್!
– ಶಿವಮೊಗ್ಗ: 6 ಜನರಿಗೆ ಚಾಕು ಇರಿತ ಪ್ರಕರಣ 9 ಜನರಿಗೆ ಜೈಲು ಶಿಕ್ಷೆ
– ಶಿವಮೊಗ್ಗ: ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ
NAMMUR EXPRESS NEWS
ಶಿವಮೊಗ್ಗ: ವಿದ್ಯುತ್ ರಿಪೇರಿ ಕಾರ್ಯದ ಸಂದರ್ಭ ವಿದ್ಯುತ್ ಶಾಕ್ಗೆ ಒಳಗಾಗಿ ಲೈನ್ ಮ್ಯಾನ್ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಭಾನುವಾರ ನಡೆದಿದೆ.ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಮೊದಲ ಅಡ್ಡರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಘಟನೆ ಸಂಭವಿಸಿದೆ. ನಲ್ಲೂರಿನ ಕಿರಣ್ ಅವರಿಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಲೈನ್ ಮ್ಯಾನ್ ಸುನಿಲ್ ಎಂಬುವವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಿಪೇರಿ ಕಾರ್ಯಕ್ಕಾಗಿ ಕಿರಣ್ ವಿದ್ಯುತ್ ಕಂಬದ ಮೇಲೆ ಹತ್ತಿದ್ದರು. ಈ ವೇಳೆ ವಿದ್ಯುತ್ ಶಾಕ್ ತಗುಲಿದೆ. ಶಬ್ದವಾಗಿದ್ದರಿಂದ ಸಮೀಪದ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಸ್ಥಳಕ್ಕೆ ದೌಡಾಯಿಸಿದ್ದರು. ಆಂಬುಲೆನ್ಸ್ಗೆ ಕರೆಯಿಸಿ ಕಿರಣ್ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆ ಹೊತ್ತಿಗಾಗಲೆ ಅವರು ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗುತ್ತಿದೆ.
ಲಕ್ಷ್ಮಿದೇವಿ ವಿಗ್ರಹ ಹಾನಿ, ನಿಧಿ ಶೋಧ: ಇಬ್ಬರು ಅರೆಸ್ಟ್!
ಸಾಗರ ತಾಲ್ಲೂಕಿನಲ್ಲಿ ನಿಧಿಶೋಧಕ್ಕಾಗಿ ದೇವಿ ವಿಗ್ರಹವನ್ನು ಹಾನಿ ಮಾಡಿ ಭೂಮಿ ಅಗೆದ ಪ್ರಕರಣವೊಂದು ದಾಖಲಾಗಿದೆ.
ಬೆಳಂದೂರು ಗ್ರಾಮದಲ್ಲಿ ಕಳೆದ ಮಂಗಳವಾರ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಲಕ್ಷ್ಮೀ ದೇವರ ಮೂರ್ತಿಯನ್ನು ಹಾನಿ ಮಾಡಿದ್ದ ಆರೋಪಿಗಳು ಭೂಮಿಯನ್ನು ಅಗೆದು ನಿಧಿಶೋಧ ನಡೆಸಿದ್ದರು.ಈ ಸಂಬಂಧ ಗ್ರಾಮ ಸುಧಾರಣೆ ಸಮಿತಿ ಪ್ರಮುಖರು ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣದ ತನಿಖೆ ಆರಂಭಿಸಿದ್ದ ಆನಂದಪುರ ಪೊಲೀಸರು, ಕೇಶವ, ಸಾಜು, ಅಂತೋನಿ, ಜನಾರ್ಧನ, ಸೋಮಶೇಖರ ಎಂಬುವವರ ವಿರುದ್ಧ ಕೇಸ್ ದಾಖಲಿಸಿ, ಈ ಪೈಕಿ ಕೇಶವ, ಅಂತೋನಿಯನ್ನು ಬಂಧಿಸಿದ್ದಾರೆ.
6 ಜನರಿಗೆ ಚಾಕು ಇರಿತ: 9 ಜನರಿಗೆ ಜೈಲು ಶಿಕ್ಷೆ
ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಚಾಕು ಇರಿತಕ್ಕೆ ಕಾರಣವಾಗಿದ್ದ ಪ್ರಕರಣದಲ್ಲಿ 9 ಜನರನ್ನ ಬಂಧಿಸಲಾಗಿದೆ. ನ್ಯಾಯಾಂಗ ಬಂಧ ಕ್ಕೊಳಪಡಿಸಲಾಗಿದೆ. ಕಿರಣ್ ಹಾಗೂ ಅವರ ಸ್ನೇಹಿತರಾದ ಅಭಿಶೇಕ್, ಅರುಣ, ರಾಜು, ಅಣ್ಣಪ್ಪ ಹಾಗೂ ಕಿಶೋರ್ ಇತರರು ಶಿವಮೊಗ್ಗ ನೇತಾಜಿ ಸರ್ಕಲ್ ನಲ್ಲಿ ಭಗತ್ ಯುವಕರ ಸಂಘ ಹೆಸರಿನಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದು, 21 ರಂದು ಮೊನ್ನೆ ರಾತ್ರಿ ಗಣಪತಿ ಪೆಂಡಾಲ್ ನಲ್ಲಿ ಅಂಧ ಯುವಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಅಂದು ರಾತ್ರಿ 9-00 ಗಂಟೆಗೆ ಕಾರ್ಯಕ್ರಮ ಮುಗಿದಾಗ ಪವನ್ ಎಂಬುವವನು ಕಿರಣ್ ಸ್ನೇಹಿತನಾದ ಅಭಿಶೇಕ್ ನೊಂದಿಗೆ ಜಗಳ ಮಾಡಿಕೊಳ್ಳುತ್ತಿದ್ದಾಗ ಕಿರಣ್ ಸಹ ಅಲ್ಲಿಗೆ ಹೋಗಿರುತ್ತಾರೆ ಅತನೊಂದಿಗೂ ಸಹ ಪವನ್ ಜಗಳ ಮಾಡಿಕೊಂಡು ಅಲ್ಲಿಂದ ಹೋಗಿರುತ್ತಾನೆ.ನಂತರ ಕಿರಣ್ ತಮ್ಮ ಸ್ನೇಹಿತರಾದ ಅಭಿಶೇಕ್, ಅರುಣ, ರಾಜು ಆಣಪ್ಪ ಹಾಗೂ ಕಿಶೋರ್ ರವರುಗಳು ರಾತ್ರಿ 11-00 ಗಂಟೆಯಿಂದ 11-30 ಗಂಟೆ ಮಧ್ಯಾವಧಿಯಲ್ಲಿ ಬಿ.ಎಸ್.ಎನ್.ಎಲ್, ಆಫೀಸ್ ಹಿಂಭಾಗದ ಮುನ್ಸಿಪಲ್ ಕಸ ಹಾಕುವ ಜಾಗದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ಸುಮಾರು 3-4 ಬೈಕ್ ಗಳಲ್ಲಿ ಪವನ್ ಜೊತೆಯಲ್ಲಿ ಸುಮಾರು 7-8 ಜನ ಹುಡುಗರು ಗುಂಪು ಕಟ್ಟಿಕೊಂಡು ಒಂದು ಚಾಕುಗಳಿಂದ ಏಕಾಏಕಿ ದಾಳಿ ಮಾಡಲಾಗಿತ್ತು.
ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ
ಶಿವಮೊಗ್ಗದ ಮಲವಗೊಪ್ಪದ ಬಳಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ. ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರು, ರಸ್ತೆಯಲ್ಲಿದ್ದ ಮಣ್ಣಿನ ದಿಬ್ಬಕ್ಕೆ ಬಡಿದು ಪಲ್ಟಿಯಾಗಿದ್ದು, ಜಖಂಗೊಂಡಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.