ಬಾವಿಗೆ ಹಾರಿ ಹಿರಿಯ ರಾಜಕಾರಣಿ ಆತ್ಮಹತ್ಯೆ!
– ಹೊಸನಗರದ ರಿಪ್ಪಿನ ಪೇಟೆ ಬಳಿ ಘಟನೆ
– ಭದ್ರಾವತಿ: ವಿಐಎಸ್ಎಲ್ ಆವರಣದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಚಿರತೆ!
NAMMUR EXPRESS NEWS
ಹೊಸನಗರ: ಮಂಡಲ ಪಂಚಾಯತ್ ಮಾಜಿ ಉಪಪ್ರಧಾನ ಹಾಗೂ ಬಸವೇಶ್ವರ ವೀರಶೈವ ಸಮಾಜದ ಸ್ಥಳದಾನಿ ಡಿ.ಸಿ ಈಶ್ವರಪ್ಪ (76) ಶನಿವಾರ ಬೆಳಗ್ಗೆ ತಮ್ಮ ಮನೆಯ ಬಳಿಯಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ಪತ್ನಿ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಈಶ್ವರಪ್ಪ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಮೂವರು ಪುತ್ರರಿದ್ದು ಅಂತ್ಯಕ್ರಿಯೆ ಬರುವೆ ಗ್ರಾಮದ ದೊಡ್ಡಿನಕೊಪ್ಪದ ಜಮೀನಿನಲ್ಲಿ ವೀರಶೈವ ಜನಾಂಗದ ಸಂಪ್ರದಾಯದಂತೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿಐಎಸ್ಎಲ್ ಆವರಣದಲ್ಲಿ ಮತ್ತೊಂದು ಚಿರತೆ!
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ವಿಐಎಸ್ಎಲ್ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಮರಿ ಸೆರೆಯಾದ ಬೆನ್ನಲ್ಲೆ ಮತ್ತೊಂದು ಚಿರತೆ ಅಲ್ಲಿಯೇ ಸಮೀಪ ಕ್ಯಾಮರಾದ ಕಣ್ಣಿಗೆ ಕಾಣಿಸಿಕೊಂಡಿದೆ. ಚಿರತೆಯ ಮರಿಯನ್ನು ಹುಡುಕಿಕೊಂಡು ಅದರ ತಾಯಿ ಚಿರತೆ ಬರಬಹುದು ಎಂದು ಅರಣ್ಯ ಇಲಾಖೆ ಈ ಮೊದಲೇ ಊಹಿಸಿತ್ತು. ಅಲ್ಲದೆ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಇದೀಗ ಅಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿರುವ ಫೋಟೊವೊಂದು ಲಭ್ಯವಾಗಿದೆ. ನೈಟ್ ಬೀಟ್ ವಾಚ್ಮನ್ ಕಾರ್ಖಾನೆಯ ಒಳಗಡೆ ಗಸ್ತು ತಿರುಗುತ್ತಿದ್ದ ವೇಳೆ ಚಿರತೆ ಕಾಣಿಸಿಕೊಂಡಿದೆ. ಸಿಬ್ಬಂದಿಯ ಜೀಪ್ಗೆ ಅಡ್ಡವಾಗಿ ಚಿರತೆ ಪಾಸ್ ಆಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಈ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.