ಜಿಂಕೆ, ಬರ್ಕ, ಕಾಡು ಮೊಲದ ಸಹಿತ ಸಿಕ್ಕಿಬಿದ್ದರು!
– ಇಬ್ಬರ ಬಂಧನ: ಎರಡು ಕಾರು ವಶ
– ಸಂಪೆಕಟ್ಟೆ ಕಾಡಲ್ಲಿ ಕಾಡುಕೋಣದ ಶಿಕಾರಿ!?
NAMMUR EXPRESS NEWS
ಶಿವಮೊಗ್ಗ : ಜಿಂಕೆ, ಬರ್ಕ ಮತ್ತು ಕಾಡು ಮೊಲ ಶಿಕಾರಿ ಮಾಡಿದ್ದ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೆ ಎರಡು ಕಾರುಗಳನ್ನು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ತಾಲೂಕು ಉಂಬ್ಳೆಬೈಲು ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಈಶ್ವರ್, ನವೀನ್, ಸುಜಿತ್, ಸುನಿಲ್, ಭರತ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಂದು ಓಮ್ನಿ ಮತ್ತು ಮಾರುತಿ 800 ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ಡಿಸಿಎಫ್ ಆಶಿಶ್ ರೆಡ್ಡಿ, ಎಸಿಎಫ್ ರತ್ನಪ್ರಭ ಮಾರ್ಗದರ್ಶನದಲ್ಲಿ ಉಂಬ್ಳೆಬೈಲು ಆರ್ಎಫ್ಒ ತೇಜ್ ವೈ.ಪಿ, ಡಿವೈಆರ್ಎಫ್ಓ ಗಿಡ್ಡಸ್ವಾಮಿ, ಡಿವೈಆರ್ಎಫ್ಓ ಅಬ್ದುಲ್ ಮಜೀದ್, ಗಸ್ತು ವನಪಾಲಕ ಶ್ರೀಕಾಂತ್, ರಂಗೇಗೌಡ, ದಿನೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಂಪೆಕಟ್ಟೆ ಕಾಡಲ್ಲಿ ಕಾಡುಕೋಣದ ಶಿಕಾರಿ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಸಂಪೆಕಟ್ಟೆಯಲ್ಲಿ ಕಾಡುಕೋಣುವೊಂದನ್ನು ಬೇಟೆಯಾಡಲಾಗಿದೆ. ಕಾಡುಕೋಣವನ್ನು ಶಿಕಾರಿ ಮಾಡಿ, ಅದರ ಮಾಂಸ ತೆಗೆದುಕೊಂಡು ಕಳೆಬರವನ್ನು ಸಂಪೆಕಟ್ಟೆಯ ಸಮೀಪದ ಎಸೆದು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾಡುಕೋಣದ ತಲೆ ಭಾಗ ಮತ್ತು ಮೂಳೆಯನ್ನು ರಸ್ತೆಯ ಪಕ್ಕ ಎಸೆದು ಹೋಗಲಾಗಿದ್ದು ಸ್ಥಳಿಯರು ಇದನ್ನ ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.