ಪ್ರಮೋದ್ ಮುತಾಲಿಕ್ ಭೇಟಿ ನೀಡಿದಂತೆ ನಿರ್ಬಂಧ!
– 30 ದಿನ ಶಿವಮೊಗ್ಗಕ್ಕೆ ಬಾರದಂತೆ ಜಿಲ್ಲಾಡಳಿತ ನಿರ್ಬಂಧ
– ಶಿವಮೊಗ್ಗ: ಬಸ್ ಮತ್ತು ಟಿಲ್ಲರ್ ನಡುವೆ ಡಿಕ್ಕಿ
– ಶಿವಮೊಗ್ಗ: ಅನುಮಾನಸ್ಪದ ವ್ಯಕ್ತಿ ಓಡಾಟ, ಪೊಲೀಸರ ವಾರ್ನಿಂಗ್
– ತೀರ್ಥಹಳ್ಳಿ: ಎರಡು ಕಾರುಗಳ ನಡುವೆ ಅಪಘಾತ
– ಶಿವಮೊಗ್ಗ: ಫುಟ್ಪಾತ್ ಮೇಲೆ ವ್ಯಕ್ತಿ ಸಾವು
NAMMUR EXPRESS NEWS
ಶಿವಮೊಗ್ಗ: ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಶಿವಮೊಗ್ಗಕ್ಕೆ 30 ದಿನಗಳ ಕಾಲ ಭೇಟಿ ನೀಡದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಅವರು ಅಕ್ಟೋಬರ್ 1 ರಂದು ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಕಲ್ಲುತೂರಾಟದಲ್ಲಿ ಹಾನಿಯಾದ ಮನೆಗಳಿಗೆ ಬುಧವಾರ ಭೇಟಿ ನೀಡಲೆಂದು ಮಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಗಡಿ ಭಾಗವಾದ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿಯೇ ಪೊಲೀಸರು ಅವರನ್ನು ತಡರಾತ್ರಿ 2 ಗಂಟೆಗೆ ತಡೆದು 30 ದಿನ ಕಾಲ ಶಿವಮೊಗ್ಗಕ್ಕೆ ಭೇಟಿ ನೀಡದಂತೆ ಜಿಲ್ಲಾಡಳಿತ ನೀಡಿರುವಂತಹ ಆದೇಶ ಪ್ರತಿಯನ್ನು ನೀಡಿ ಅವರನ್ನು ಪ್ರತ್ಯೇಕ ದಾರಿಯಲ್ಲಿ ದಾವಣಗೆರೆಯವರೆಗೂ ಕಳುಹಿಸಿದ್ದಾರೆ.
ಶಿವಮೊಗ್ಗದಲ್ಲಿ ಬಸ್ ಅಪಘಾತ
ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮೀಪುರದಲ್ಲಿ ಬಸ್ ಹಾಗೂ ಟಿಲ್ಲರ್ ನಡುವೆ ಅಪಘಾತವಾಗಿದೆ. ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ವಾಹನಗಳನ್ನು ತೆರವುಗೊಳಿಸಿ ಸ್ಟೇಷನ್ಗೆ ರವಾನಿಸಿದ್ದಾರೆ. ಅಪಘಾತದಲ್ಲಿ ಬಸ್ನ ಒಂದು ಭಾಗ ಜಖಂಗೊಂಡಿದೆ.
ಅನುಮಾನಸ್ಪದ ವ್ಯಕ್ತಿ ಓಡಾಟ, ಪೊಲೀಸರ ವಾರ್ನಿಂಗ್!
ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅನುಮಾನಸ್ಪದವಾಗಿ ಅಪರಿಚಿತ ವ್ಯಕ್ತಿಯೊಬ್ಬ ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ 112 ಸಿಬ್ಬಂದಿ ಅಪರಿಚಿತ ವ್ಯಕ್ತಿಯನ್ನು ವಿಚಾರಿಸಿದ್ದಾರೆ. ವ್ಯಕ್ತಿಯು ಅದೇ ಗ್ರಾಮದವನಾಗಿದ್ದು, ಗ್ರಾಮಸ್ಥರಿಗೂ ಹಾಗೂ ಆತನಿಗೂ ಸೂಕ್ತ ತಿಳುವಳಿಕೆ ನೀಡಿ ವಾಪಸ್ ಆಗಿದ್ದಾರೆ.
ತೀರ್ಥಹಳ್ಳಿ: ಎರಡು ಕಾರುಗಳ ನಡುವೆ ಅಪಘಾತ
ಮಾಳೂರು ಠಾಣಾ ವ್ಯಾಪ್ತಿಯ ಕುಡುಮಲ್ಲಿಗೆ ಬಳಿ 2 ಕಾರುಗಳ ನಡುವೆ ಅಪಘಾತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇನ್ನೂ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಫುಟ್ಪಾತ್ ಮೇಲೆ ವ್ಯಕ್ತಿ ಸಾವು
ಶಿವಮೊಗ್ಗ: ವ್ಯಕ್ತಿಯೊಬ್ಬರು ಹೊಳೆ ಬಸ್ ನಿಲ್ದಾಣ ಸಮೀಪ ಫುಟ್ಪಾತ್ ಮೇಲೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಅ.12ರಂದು ಘಟನೆ ಸಂಭವಿಸಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಮೃತನು ಸುಮಾರು 50 ವರ್ಷದವರು. 5 ಅಡಿ 4 ಇಂಚು ಎತ್ತರ, ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ. ತಲೆಯಲ್ಲಿ 4 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು, 3 ಇಂಚು ಉದ್ದದ ಬಿಳಿ ಹಾಗೂ ಕಪ್ಪು ಮಿಶ್ರಿತ ಗಡ್ಡ ಇರುತ್ತದೆ. ಬಲಗೈ ಮೇಲೆ ಎಂಪಿ ಹಾಗೂ ಓಂ ಮತ್ತು ಎಡಗೈ ಮೇಲೆ ಎಸ್.ಎಂ ಎಂಬ ಹಚ್ಚೆ ಗುರುತು ಇದೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.