ಜಾನಪದ ಕಲಾವಿದೆ ಚೌಡಮ್ಮಗೆ ರಾಜ್ಯೋತ್ಸವ ಪ್ರಶಸ್ತಿ!
– ಹಳ್ಳಿ ಕಲಾವಿದೆಗೆ ಒಲಿದ ರಾಜ್ಯ ಮಟ್ಟದ ಗೌರವ
– ಕಡೂರು ತಾಲೂಕಿನ ಚಿಕ್ಕಬಾಸೂರು ಗ್ರಾಮದ ಕಲಾವಿದೆ
NAMMUR EXPRESS NEWS
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಬಾಸೂರು ಗ್ರಾಮದ ಜಾನಪದ ಕಲಾವಿದೆ ಚೌಡಮ್ಮ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದ್ದು ಜಿಲ್ಲೆಯಲ್ಲಿ ಸಂಭ್ರಮ ವ್ಯಕ್ತವಾಗಿದೆ. ಬಾಲ್ಯದಿಂದಲೂ ತನ್ನ ತಾಯಿ ಅವರಿಂದ ಬಳುವಳಿಯಾಗಿ ಬಂದ ಸೋಬಾನೆ ಪದಗಳನ್ನು ಹಾಡುತ್ತಾ ರೈತಾಪಿ ಜೀವನದೊಂದಿಗೆ ಬದುಕು ಕಟ್ಟಿಕೊಂಡಿದ್ದು, ಸೋಬಾನೆ ಚೌಡಮ್ಮ ಎಂದೇ ಈ ಭಾಗದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಚೌಡಮ್ಮ ಅವರ ಪತಿ ಬೇಲೂರಯ್ಯ ಭೈರಪ್ಪರ ಸಹಕಾರದಿಂದಾಗಿ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡಿರುವ ಚೌಡಮ್ಮ ಅವರು ಸುತ್ತಮುತ್ತಲ ಭಾಗದ ಗ್ರಾಮಗಳಲ್ಲಿ ಮದುವೆ, ಶುಭ ಸಮಾರಂಭಗಳಲ್ಲಿ ಸೋಬಾನೆ ಪದ ಹಾಡುವ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ.
ಸೋಬಾನ ಪದಗಳ ಮೂಲಕ ಗ್ರಾಮೀಣ ಸಂಪ್ರದಾಯಗಳನ್ನು ನೆರವೇರಿಸುತ್ತಾ ಬಂದವರು. ಇವರ ಗಾಯನ ಪ್ರತಿಭೆಯನ್ನು ಗುರುತಿಸಿ ಭದ್ರಾವತಿ ಆಕಾಶವಾಣಿಯು ಬಿ ಗ್ರೇಡ್ ಕಲಾವಿದೆಯಾಗಿ ಮನ್ನಣೆ ನೀಡಿ ಅನೇಕ ಬಾರಿ ಇವರು ಹಾಡಿದ ಸೋಬಾನೆ ಪದಗಳನ್ನು ಪ್ರಸಾರ ಮಾಡಿದ್ದಾರೆ. ಇದೀಗ ಅವರಿಗೆ ರಾಜ್ಯೋತ್ಸವದ ಪ್ರಶಸ್ತಿ ಬಂದಿದ್ದು ಇಡೀ ಜಿಲ್ಲೆಗೆ ಸಂಭ್ರಮ ತಂದಿದೆ.