ಶೃಂಗೇರಿಯಲ್ಲಿ ಬೃಹತ್ ಶಂಕರಾಚಾರ್ಯರ ಪ್ರತಿಮೆ!
– ಪ್ರವಾಸಿ ತಾಣವಾಗಲಿದೆ ಮತ್ತೊಂದು ಪ್ರತಿಮೆ, ಸೂರ್ಯಸ್ತಮಾನ ವೀಕ್ಷಣೆಗೂ ಅವಕಾಶ
-ನ.10 ರಂದು ಶಂಕರಾಚಾರ್ಯರ ಪ್ರತಿಮೆ ಶಂಕುಸ್ಥಾಪನೆ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಶಾರದಾಂಬೆ ಊರಲ್ಲಿ ಮತ್ತೊಂದು ಪ್ರವಾಸಿ ತಾಣ ನಿರ್ಮಾಣವಾಗಲಿದೆ. ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿರುವ ಪ್ರಶಾಂತವಾದ ಪಟ್ಟಣದಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದ್ದರು. ಇದೀಗ ಈ ಪ್ರಸಿದ್ದ ನೆಲದಲ್ಲಿ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆಗೆ ಸಜ್ಜಾಗಿದೆ. ಶಾರದಾ ಪೀಠದಿಂದ 2 ಕಿ.ಮೀ. ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಾಣವಾಗಿರುವ 32 ಅಡಿ ಎತ್ತರದ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆ ನ.10ರಂದು ನೆರವೇರಲಿದೆ. ಭವ್ಯಮೂರ್ತಿ ಸ್ಥಾಪಿಸುವ ಆಶಯದಿಂದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ 2013 ರ ಜೂ.3 ರಂದು ಮಾರುತಿ ಬೆಟ್ಟದಲ್ಲಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಶ್ರೀ ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದಲ್ಲಿಯೇ ಶಂಕರರ ಪ್ರತಿಮೆ ಜತೆಗೆ ಅವರ ಶಿಷ್ಯರಾದ ಜಗದ್ಗುರು ಶ್ರೀ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯರ ಮೂರ್ತಿಗಳು ಅನಾವರಣಗೊಳ್ಳಲಿವೆ.
2 ಎಕರೆಯಲ್ಲಿ ನಿರ್ಮಾಣ:
45 ಕೋಟಿ ರೂ. ವೆಚ್ಚದಲ್ಲಿ ಸುಮಾರು 2 ಎಕರೆ ಜಾಗದಲ್ಲಿ ಮೂರ್ತಿ ನಿರ್ಮಾಣವಾಗಿದ್ದು, ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆಯನ್ನು ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಸರಿಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.
ಸೂರ್ಯಾಸ್ತ ವೀಕ್ಷಣೆಗೆ ವ್ಯವಸ್ಥೆ!
ಈ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು ಮತ್ತು ಇಳಿಯಲು ಎಸ್ಕಲೇಟರ್ ಅಳವಡಿಸಲಾಗಿದೆ.
ಶೃಂಗೇರಿ ಪ್ರವಾಸಿಗರ ಹೆಚ್ಚಳ
ಶೃಂಗೇರಿ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಇದೀಗ ಈ ಪ್ರತಿಮೆ ನಿರ್ಮಾಣದ ಮೂಲಕ ಮತ್ತಷ್ಟು ಪ್ರವಾಸಿಗರನ್ನು ಈ ಪ್ರತಿಮೆ ಸೆಳೆಯಲಿದೆ.