- ಹಂತ ಹಂತವಾಗಿ ನಡೆಸಲು ಕೋರ್ಟ್ ಆದೇಶ
ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಗ್ರಾ.ಪಂ.ಗಳಿಗೆ ಹಂತಹಂತವಾಗಿ ಚುನಾವಣೆ ನಡೆಸಲು ಸರ್ಕಾರವೇ ಮುಂದೆ ಬರಬೇಕಿತ್ತು. ಅದನ್ನು ಬಿಟ್ಟು ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಸರ್ಕಾರ ಕೇಳುತ್ತಿರುವುದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.
ಸದ್ಯ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿದ್ದು, ಕಡಿಮೆ ಪ್ರಕರಣಗಳಿರುವ ಜಿಲ್ಲೆ ಅಥವಾ ತಾಲೂಕುಗಳನ್ನು ಆಯ್ದುಕೊಂಡು ಹಂತ ಹಂತವಾಗಿ ಚುನಾವಣೆ ನಡೆಸಬಹುದು. ಸರ್ಕಾರ ಹಲವು ಶಾಲಾ ಕಾಲೇಜುಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಹೀಗಿರುವಾಗ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ? ಚುನಾವಣೆ ನಡೆಸಲು ಸರ್ಕಾರಕ್ಕೆ ಇಷ್ಟವಿಲ್ಲವೇ? ಎಂದು ಕೋರ್ಟ್ ಪ್ರಶ್ನಿಸಿತು.
ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ವಿಧಾನಪರಿಷತ್ ಸದಸ್ಯ ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಸಿಜೆ ಓಕ್ ನೇತೃತ್ವದ ವಿಭಾಗೀಯ ಪೀಠ, ಚುನಾವಣಾ ಆಯೋಗ, ರಾಜ್ಯ ಸರ್ಕಾರ ಹಾಗೂ ಅರ್ಜಿದಾರರ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿತು. ಅರ್ಜಿ ಸಂಬಂಧ ಆಕ್ಷೇಪಣೆಗಳೇನಾದರೂ ಇದ್ದರೆ ಅ.29ರೊಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಅರ್ಜಿದಾರರು ಹಾಗೂ ಪ್ರತಿವಾದಿಗಳಿಗೆ ನ್ಯಾಯಪೀಠ ಸೂಚಿಸಿತು. ಇದೇ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಹೊರತಾಗಿಯೂ ಚುನಾವಣೆ ನಡೆಸುವ ಸಂಬಂಧ ನಿರ್ಧಾರ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮುಕ್ತ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ಸರ್ಕಾರ ಚುನಾವಣೆಗಳನ್ನು ವಿರೋಧಿಸುತ್ತಿಲ್ಲ. ಗ್ರಾ.ಪಂ. ಚುನಾವಣೆಗಳಲ್ಲಿ ಸರ್ಕಾರಕ್ಕೆ ಯಾವುದೇ ರಾಜಕೀಯ ಹಿತಾಸಕ್ತಿಯೂ ಇಲ್ಲ. ಚುನಾವಣೆಗಳು ಗ್ರಾಮಗಳಿಗಷ್ಟೇ ಸೀಮಿತವಾಗಿದ್ದು, ಪಕ್ಷಗಳ ಆಧಾರದಲ್ಲಿ ನಡೆಯುವುದಿಲ್ಲ. ಚುನಾವಣೆ ನಡೆಸಬೇಕೆಂಬುದೇ ಸರ್ಕಾರದ ಉದ್ದೇಶವೂ ಆಗಿದೆ. ಆದರೆ, ಸಾಲು ಸಾಲು ಹಬ್ಬಗಳು, ಚಳಿಗಾಲ ಹಾಗೂ ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ವಲ್ಪ ಸಮಯಾವಕಾಶ ಕೋರಲಾಗುತ್ತಿದೆ ಎಂದರು.
ಚುನಾವಣೆ ನಡೆಸಲು ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರದ ಜತೆ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಲಾಗಿದೆ. ಚುನಾವಣೆ ಆಯೋಜನೆಗೆ ವಿಶೇಷ ಎಸ್ಒಪಿ ಸಿದ್ಧಪಡಿಸಲಾಗಿದೆ. ಯಾವ ಜಿಲ್ಲೆಗಳು ಹಾಗೂ ತಾಲೂಕುಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇರುತ್ತದೆಯೋ ಅಂಥ ಕಡೆ ಹಂತಹಂತವಾಗಿ ಚುನಾವಣೆ ನಡೆಸಲಾಗುವುದು. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ನ್ಯಾಯಪೀಠಕ್ಕೆ ಚುನಾವಣಾ ಆಯೋಗ ವಿವರಿಸಿದೆ. ಈ ಮೂಲಕ ಹಂತ ಹಂತವಾಗಿ ಚುನಾವಣೆ ನಡೆಸುವ ಸಾಧ್ಯತೆಗಳನ್ನು ಕೋರ್ಟ್ ನೀಡಿದೆ.