ಗೆದ್ದು ಬಾ ಭಾರತ..!
– ಮೂರನೇ ವಿಶ್ವ ಕಪ್ ಗೆಲುವಿಗೆ ಭಾರತ ಸಜ್ಜು
– ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ಲೈವ್ ಮ್ಯಾಚ್
– ಇಡೀ ದೇಶವೇ ಪಂದ್ಯಕ್ಕೆ ಕಾತುರ
NAMMUR EXPRESS NEWS
ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವ ಕಪ್ ಫೈನಲ್ ಪಂದ್ಯ ಭಾರತ -ಆಸ್ಟ್ರೇಲಿಯಾ ನಡುವೆ ನಡೆಯಲಿದ್ದು, ಇಡೀ ದೇಶದ ಜನತೆ ಭಾರತ ಗೆಲುವಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ನ.19ರಂದು 2 ಗಂಟೆಗೆ ಮ್ಯಾಚ್ ಶುರುವಾಗಲಿದೆ. ಈಗಾಗಲೇ ಭಾರತ 9 ಪಂದ್ಯದಲ್ಲಿ 9 ಗೆದ್ದಿದೆ. ಆಸ್ಟ್ರೇಲಿಯಾ 9 ಮ್ಯಾಚ್ ಪೈಕಿ 7 ಗೆದ್ದಿದೆ. ಕಳೆದ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಪಂದ್ಯದಲ್ಲಿ ಸೋತಿದ್ದ ಭಾರತ ಈ ಬಾರಿ ಸತತವಾಗಿ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ್ದು 1996, 2014ರ ನಂತರ ಮತ್ತೊಮ್ಮೆ ವಿಶ್ವಕಪ್ ಗೆ ಗೆಲ್ಲಲು ಕಾತುರವಾಗಿದೆ.
ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ಲೈವ್ ಮ್ಯಾಚ್
ರಾಜ್ಯದ ಜಿಲ್ಲಾ ಕ್ರೀಡಾಂಗಣಗಳಲ್ಲಿ ಬಿಗ್ ಸ್ಕ್ರೀನ್ಲ್ಲಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ನೇರ ಪ್ರಸಾರ ಮಾಡಿ ವೀಕ್ಷಣೆಗೆ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸುತ್ತೋಲೆ ಹೊರಡಿಸಿದೆ. ನವೆಂಬರ್ 19 ರಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ವಂದ್ಯಾವಳಿಯ ಅಂತಿಮ ಪಂದ್ಯದ ನೇರ ಪ್ರಸಾರವನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣಗಳಲ್ಲಿ ಪ್ರಸಾರ ಮಾಡಬೇಕು ಎಂದು ತಿಳಿಸಿದೆ.
ದೊಡ್ಡ ಪರದೆಯಲ್ಲಿ ಅವಕಾಶ
ಜಿಲ್ಲಾ ಕ್ರೀಡಾಂಗಣಗಳಲ್ಲಿ ಸಾರ್ವಜನಿಕರಿಗೆ / ಕ್ರೀಡಾಪಟುಗಳಿಗೆ ಅಗತ್ಯ ಅಳತೆಯ ದೊಡ್ಡ ಪರದೆಯಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಅಗತ್ಯ ಪ್ರಚಾರ ಕೈಗೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಂದ್ಯ ವೀಕ್ಷಿಸುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದೆ. ಇನ್ನು ಈ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಫೈನಲ್ ಪಂದ್ಯದಲ್ಲಿ ಏರ್ ಶೋ
ಭಾನುವಾರ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಭಾರತ-ಆಸ್ಪ್ರೇಲಿಯಾ ಫೈನಲ್ ಪಂದ್ಯವು ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಪಂದ್ಯ ಪ್ರಾರಂಭಕ್ಕೂ ಮುನ್ನ ಭಾರತೀಯ ವಾಯು ಸೇನೆ ವಿಶೇಷ ಏರ್ ಶೋ ಹಮ್ಮಿಕೊಂಡಿದೆ. ವಾಯುಪಡೆಯ ಸೂರ್ಯಕಿರಣ್ ತಂಡದ ನೇತೃತ್ವದಲ್ಲಿ ವೈಮಾನಿಕ ಸಾಹಸ ಪ್ರದರ್ಶನ ನಡೆಯಲಿದೆ. ಈ ನಿಟ್ಟಿನಲ್ಲಿ ಶುಕ್ರವಾರದಿಂದಲೇ ಪೂರ್ವಭ್ಯಾಸ ಆರಂಭವಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಪಂದ್ಯ ವೀಕ್ಷಣೆ
ಪಂದ್ಯ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ, ಆಸ್ಪ್ರೇಲಿಯಾ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಆಗಮಿಸಲಿದ್ದಾರೆ. ಈಗಾಗಲೇ ಅಹಮದಾಬಾದ್ಗೆ ವಿಮಾನ ಪ್ರಯಾಣದರ 6 ಪಟ್ಟು ಹೆಚ್ಚಾಗಿದೆ. ಅಲ್ಲದೆ, ನಗರದಲ್ಲಿ ಹೋಟೆಲ್ ರೂಮ್ಗಳಿಗೆ ಬಾಡಿಗೆ ಹಲವು ಪಟ್ಟು ಹೆಚ್ಚಾಗಿದ್ದು, 1 ಲಕ್ಷ ರೂ.ವರೆಗೂ ಪಡೆಯಲಾಗುತ್ತಿದೆ ಎಂದ ಮೂಲಗಳು ತಿಳಿಸಿವೆ.
ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಉಗ್ರನ ಬೆದರಿಕೆ
ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬೆದರಿಕೆ ಹಾಕಿದ್ದಾನೆ. ನಾಳಿನ ಫೈನಲ್ ಪಂದ್ಯ ನಡೆಯೋದಕ್ಕೆ ನಾವು ಬಿಡುವುದಿಲ್ಲ, ನಿಲ್ಲಿಸಿಯೇ ನಿಲ್ಲಿಸುತ್ತೇವೆ ಅಂತ ಬೆದರಿಕೆ ಹಾಕಿದ್ದಾನೆ.