ಮೂವರ ಬಲಿ ಪಡೆದ ಕಾಡಾನೆ ಹಿಡಿಯಲು ಪ್ಲಾನ್!
– ಕಾಡಾನೆ ದಾಳಿಗೆ ಬಲಿ: ಯುವಕನ ನಾಯಿ ಕಣ್ಣೀರು
– ತರೀಕೆರೆ: ಸೆರೆ ಸಿಕ್ಕ ಚಿರತೆ, ನಿಟ್ಟುಸಿರು ಬಿಟ್ಟ ಜನತೆ
NAMMUR EXPRESS NEWS
ತರೀಕೆರೆ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ಹಾಗೂ ಕಾರೇಹಳ್ಳಿ ಭಾಗದಲ್ಲಿ ಆಗಾಗ ಪ್ರತ್ಯಕ್ಷವಾಗುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಳೆ ಎಣ್ಣೆ ಫ್ಯಾಕ್ಟರಿ ಆವರಣದಲ್ಲಿ ಕೆಲವು ದಿನಗಳಿಂದ ಸಂಚರಿಸುತ್ತಾ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ತಾಳೆ ಎಣ್ಣೆ ಫ್ಯಾಕ್ಟರಿ ಆವರಣದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ರಾಕ್ಷಸ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಆದೇಶ
ಮೂಡಿಗೆರೆ ಅರಣ್ಯ ವಲಯದ ಊರುಬಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಮೂಡಿಗೆರೆ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಬುಧವಾರ ಕಾಡಾನೆಯಿಂದ ಆನೆ ಕಾರ್ಯಪಡೆಯ ನೌಕರ ಕಾರ್ತಿಕ್ ಗೌಡ ಎಂಬುವವರನ್ನು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕೆಂದು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದ ಮೂರು ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಭರವಸೆ ನೀಡಿದ್ದರು. ಈ ಸಂಬಂಧ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಕ್ಷೇತ್ರದ ಶಾಸಕಿ ಶ್ರೀಮತಿ ನಯನ ಮೋಟಮ್ಮ ಅವರು ಸಹ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಯುವಕನ ನಾಯಿಯ ರೋಧನೆ!
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಬಳಿ ಸಿಬ್ಬಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಜಮಾನನ ಮೃತದೇಹ ನೋಡಿ ಸಾಕುನಾಯಿಯ ರೋಧನೆ ಮುಗಿಲು ಮುಟ್ಟಿದೆ. ಕಾಡಾನೆ ದಾಳಿಗೆ ಸಾವನ್ನಪ್ಪಿದ ಗೌಡಹಳ್ಳಿ ಗ್ರಾಮದ ಸಿಬ್ಬಂದಿ ಕಾರ್ತಿಕ್ ತನ್ನ ನಾಯಿಯನ್ನು ಪ್ರೀತಿಯಿಂದ ಸಾಕಿದ್ದರು. ಈ ಹಿನ್ನಲೆ ಒಡೆಯನ ಮೃತದೇಹದ ಎದುರು ಸಾಕು ನಾಯಿ ಕಣ್ಣೀರು ಹಾಕುತ್ತಿದೆ. ಈ ನಾಯಿಯ ಪ್ರೀತಿ ನೋಡಿ ಅಂತ್ಯಕ್ರಿಯೆಗೆ ಬಂದಿದ್ದ ಸ್ಥಳೀಯರು ಕೂಡ ಕಣ್ಣೀರು ಹಾಕಿರುವ ಮನ ಕಲಕುವ ಘಟನೆ ನಡೆದಿದೆ.