ರೈತರ ವಿದ್ಯುತ್ ಸಮಸ್ಯೆ ಬಗೆಹರಿಸಿದ ಸಚಿವ ಜಾರ್ಜ್!
– ಚಿಕ್ಕಮಗಳೂರಿನಲ್ಲಿ ತೀರ್ಥಹಳ್ಳಿಯ ಮುಖಂಡರ ನಿಯೋಗದ ಭೇಟಿ
– ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವರು
NAMMUR EXPRESS NEWS
ಚಿಕ್ಕಮಗಳೂರು : ಮಲೆನಾಡಿನ ಅಡಿಕೆ ಸುಲಿಯುವ ರೈತರಿಗೆ ವಿದ್ಯುತ್ ಇಲಾಖೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ತೀರ್ಥಹಳ್ಳಿಯ ಕಾಂಗ್ರೆಸ್ ಮುಖಂಡರ ನಿಯೋಗ, ರಾಜ್ಯ ಇಂಧನ ಸಚಿವ ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ವೇಳೆ ಅಧಿಕಾರಿಗಳಿಗೆ ಮತ್ತು ಉನ್ನತ ಇಲಾಖೆಗೆ ತಕ್ಷಣ ಕ್ರಮ ವಹಿಸುವಂತೆ ಸಲಹೆ ನೀಡಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಮಾರ್ಗದರ್ಶನದಲ್ಲಿ ಜಾರ್ಜ್ ಅವರ ಭೇಟಿಗೆ ನಿಗದಿ ಮಾಡಿದ್ದು, ಈ ವೇಳೆ ತೀರ್ಥಹಳ್ಳಿಯ ಪ್ರಮುಖ ಮುಖಂಡರಾದ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ರೈತ ಪರ ಮುಖಂಡರಾದ ಹಸಿರುಮನೆ ಮಹಾಬಲೇಶ್, ಬಾಳೆಹಳ್ಳಿ ಪ್ರಭಾಕರ್ ಹಾಗೂ ಗಿರೀಶ್ ಉಪಸ್ಥಿತರಿದ್ದರು.
ಜಾರ್ಜ್, ಮಧು ಬಂಗಾರಪ್ಪ, ಕಿಮ್ಮನೆಗೆ ಅಭಿನಂದನೆ
ಅಡಿಕೆ ಯಂತ್ರಕ್ಕೆ ವಿದ್ಯುತ್ ಮೀಟರ್ ಅನ್ನು ತಕ್ಷಣ ನಿಲ್ಲಿಸಬೇಕು. ಈ ಬಗ್ಗೆ ರೈತರು ಭಯ ಪಡುವುದು ಬೇಡ ಎಂದ ಜಾರ್ಜ್ ಅವರು ತಕ್ಷಣ ಸಂಬಂಧಿಸಿದ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲಹೆ ನೀಡಿದ್ದು, ಮಲೆನಾಡಿನಲ್ಲಿ ಅಡಿಕೆ ಸುಲಿಯುವ ಯಂತ್ರಕ್ಕೆ ವಿದ್ಯುತ್ ಮೀಟರ್ ಅಳವಡಿಕೆಯ ಕ್ರಮದ ಬಗ್ಗೆ ತಕ್ಷಣ ನಿಲ್ಲಿಸುವಂತೆ ಆದೇಶ ಮಾಡಿದ್ದಾರೆ ಎಂದು ಸ್ಥಳೀಯ ನಿಯೋಗದವರು ತಿಳಿಸಿದ್ದಾರೆ. ಈ ವೇಳೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಕೂಡ ಹಾಜರಿದ್ದರು. ಸ್ಥಳೀಯ ಮುಖಂಡರು, ರಾಜ್ಯ ಇಂಧನ ಸಚಿವ ಜಾರ್ಜ್ ಹಾಗೂ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.