- ಮೈಸೂರಲ್ಲಿ ಅಂಬಾರಿ ಹೊತ್ತ ಅಭಿಮನ್ಯು
- ರಾಜ್ಯದ ಎಲ್ಲಾ ಕಡೆ ಸರಳ ದಸರಾ ಆಚರಣೆ
ಮೈಸೂರು/ಬೆಂಗಳೂರು: ನಾಡ ಹಬ್ಬ ದಸರಾವನ್ನು ರಾಜ್ಯದ ಎಲ್ಲೆಡೆ ಕರೋನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಯಿತು. ಆದರೂ ಜನ ಹಬ್ಬದ ಸಡಗರವನ್ನು ಸಂಭ್ರಮಿಸಿದರು.
ಮೈಸೂರಲ್ಲಿ ಅಂಬಾರಿ ಮೆರವಣಿಗೆ ಈ ಸಲ ನೆಡೆಯಿತು. ರಾಜ್ಯದ ಪ್ರಮುಖ ದೇವಾಲಯಗಳಾದ ಶೃಂಗೇರಿ, ಕೊಲ್ಲೂರು, ಕುದ್ರೋಳಿ ಸೇರಿದಂತೆ ಅಮ್ಮನವರ ಶಕ್ತಿಪೀಠಗಳಲ್ಲಿ ಸಂಭ್ರಮದ ದಸರಾ ನಡೆಯಿತು. ದಸರಾಕ್ಕೆ ಅಲ್ಲಲ್ಲಿ ವರುಣನ ಸಿಂಚನವಾಯಿತು. ರಾಜಧಾನಿಯಲ್ಲಿ ಕೂಡ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಲಕ್ಷಾಂತರ ಭಕ್ತರು ಕರೋನಾ ಸಂಕಷ್ಟ ದೂರ ಮಾಡುವಂತೆ ಪ್ರಾರ್ಥನೆ ಮಾಡಿದರು.
ಮೈಸೂರಲ್ಲಿ ಸರಳ ಜಂಬೂ ಸವಾರಿ!: ಐತಿಹಾಸಿಕ ಮೈಸೂರು ಜಂಬೂ ಸವಾರಿ ಈ ಬಾರಿ ಸರಳವಾಗಿ ನಡೆಯಿತು. ಸಿಎಂ ಯಡಿಯೂರಪ್ಪ ಅವರು ಸೋಮವಾರ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಚಾಲನೆ ನೀಡಿದ್ದು, ಅರಮನೆ ಆವರಣಕ್ಕೆ ಸೀಮಿತಗೊಂಡ ಈ ಬಾರಿಯ ಜಂಬೂ ಸವಾರಿಯಲ್ಲಿ ಅಭಿಮನ್ಯು ಮೊದಲ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು, ವಿಜಯ ಕಾವೇರಿ, ಗೋಪಿ ಆನೆಗಳು ಸಾಥ್ ನೀಡಿದ್ದವು.
ಬಲರಾಮ ದ್ವಾರದ ಬಳಿ ಸಂಜೆ 4.17 ವೇಳೆಗೆ ಜಂಬೂ ಸವಾರಿ ಮೆರವಣಿಗೆ ಮುಕ್ತಾಯವಾಯಿತು. ಈ ಎರಡು ಸ್ತಬ್ಧಚಿತ್ರಗಳು, 5 ಕಲಾ ತಂಡಗಳು ಮಾತ್ರ ಭಾಗಿಯಾಗಿದ್ದವು. ಪ್ರತಿವರ್ಷ ಐದು ಕಿಮೀ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಅರಮನೆ ಆವರಣದೊಳಗಿನ ಭುವನೇಶ್ವರಿ ದೇವಸ್ಥಾನದಲ್ಲಿ ಶಮಿಪೂಜೆ ನಡೆಸುವುದರೊಂದಿಗೆ ಕೊನೆಗೊಂಡಿದೆ.
ಸುಮಾರು 500 ವರ್ಷಗಳ ನಂತರ, ಸೋಮವಾರ ಮೈಸೂರಿನ ರಾಜಮನೆತನದ ವಿಜಯದಶಮಿ ಮೆರವಣಿಗೆಯನ್ನು ಗುರುತಿಸಲು ಅಂಬಾ ವಿಲಾಸ್ ಅರಮನೆಯ ಆವರಣದಲ್ಲಿ ಹಿಂದಿನ ಯುಗದ ಚಿತ್ರಣಗಳು ತೆರೆದುಕೊಂಡು ಕಣ್ಮನ ತಣಿಸಿವೆ. ರಾಜ್ಯದ ಎಲ್ಲಾ ತಾಲೂಕು, ಹಳ್ಳಿಗಳ ದೇವಾಲಯಗಳಲ್ಲಿ ಕೂಡ ಸರಳವಾಗಿ ದಸರಾ ಆಚರಣೆ ನಡೆಯಿತು.