ಹೆದ್ದಾರಿ ಅಗಲೀಕರಣ ವೇಳೆ ದುರಂತ: ಓರ್ವ ಸಾವು
– ಶೃಂಗೇರಿ ತಾಲೂಕಿನ ತನಿಕೋಡು ಚೆಕ್ ಪೋಸ್ಟ್ ಬಳಿ ಘಟನೆ
– ಬೆಳ್ತಂಗಡಿ: ಕುಡಿದ ಮತ್ತಲ್ಲಿ ಪತ್ನಿಯ ಕಣ್ಣು ಕಚ್ಚಿದ ಗಂಡ!
– ಹೊಸನಗರ: ತಂಬಾಕು ಅಂಗಡಿಗಳ ಮೇಲೆ ದಾಳಿ
NAMMUR EXPRESS NEWS
ಶೃಂಗೇರಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನಲೆ ಜೆಸಿಬಿಯಿಂದ ಮಣ್ಣು ತೆಗೆಯುವ ವೇಳೆ ನಾಲ್ವರು ಕಾರ್ಮಿಕರ ಮೇಲೆ ಮಣ್ಣು ಕುಸಿದು, ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದ ತನಿಕೋಡು ಚೆಕ್ ಪೋಸ್ಟ್ ಬಳಿ ಸಂಭವಿಸಿದೆ. ಜೆಸಿಬಿ ಯಂತ್ರ ಬಳಸಿ ರಸ್ತೆಯ ತಡೆಗೋಡೆ ನಿರ್ಮಾಣ ವೇಳೆ ಎಕಾಏಕಿ ಮಣ್ಣು ಕುಸಿದಿದೆ. ತಕ್ಷಣವೇ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಸ್ವಲ್ಪ ಸಮಯದ ವೇಳೆ ಮತ್ತೊಬ್ಬ ಕಾರ್ಮಿಕನ ರಕ್ಷಣೆ ಮಾಡಲಾಗಿದೆ. ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಸತತ ಒಂದು ಗಂಟೆ ಕಾಲ ಮೂರು ಜೆಸಿಬಿ ಮೂಲಕ ಕಾರ್ಯಾಚಾರಣೆ ಮಾಡಲಾಗಿತ್ತು. ಆದರೆ ಒಂದೂವರೆ ಗಂಟೆಗಳ ಕಾಲ ಮಣ್ಣಿನಡಿಯಲ್ಲಿ ಸಿಲುಕಿದ ಕಾರಣ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ರಾಜ್ ಕಮಲ್ ಗುತ್ತಿಗೆ ಕಂಪೆನಿಗೆ ಸೇರಿದ ಜೆಸಿಬಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಆಂಬುಲೆನ್ಸ್ ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿ ಕಾರ್ಮಿಕರ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಡಿತ ಮತ್ತಿನಲ್ಲಿ ಪತ್ನಿಯ ಕಣ್ಣನ್ನೆ ಕಚ್ಚಿದ ಪತಿ!
ಕಂಠ ಪೂರ್ತಿ ಕುಡಿದ ಪತಿ ತನ್ನ ಹೆಂಡತಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ ವಿಕೃತ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದಿದೆ. ಮೋಹಿನಿ ಎಂಬ ಮಹಿಳೆಗೆ ಆತನ ಪತಿ ಸುರೇಶ್ ಗೌಡ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಮಹಿಳೆ ಹಾಗೂ ಆಕೆಯ ಮಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುರೇಶ್ ಗೌಡ(55) ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲಿನ ಮೋಹಿನಿ(55)ಯನ್ನು ಕಳೆದ 22 ವರ್ಷದ ಹಿಂದೆ ಮದುವೆಯಾಗಿದ್ದ. ಶಿಶಿಲದಲ್ಲಿ ಮೋಹಿನಿ ತಂದೆಯವರು ಕೊಟ್ಟ ಜಾಗದಲ್ಲಿ ದಂಪತಿ ವಾಸವಾಗಿದ್ದು ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದ. ಡಿ.18 ರಾತ್ರಿ 12ಗಂಟೆ ಸುಮಾರಿಗೆ ಕಂಠ ಪೂರ್ತಿ ಕುಡಿದು ತೇಲಾಡುತ್ತ ಮನೆಗೆ ಬಂದ ಸುರೇಶ್ ಗೌಡ, ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಮತ್ತೊಂದೆಡೆ ಮಗಳ ಮೇಲೂ ಹಲ್ಲೆ ನಡೆಸಿದ್ದು ಆಕೆಗೂ ಗಾಯಗಳಾಗಿವೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಸುರೇಶ್ಗಾಗಿ ಪೊಲೀಸರು ಹುಡುಕಾಟ ನಡೆಯುತ್ತಿದ್ದಾರೆ.
ಹೊಸನಗರದಲ್ಲಿ ತಂಬಾಕು ಮಾರಾಟ: ಅಂಗಡಿಗಳ ಮೇಲೆ ದಾಳಿ
ಹೊಸನಗರ ಪಟ್ಟಣದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಸುರೇಶ್ ಅವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾಯ್ದೆಯನ್ವಯ ಹೊಸನಗರ ಪಟ್ಟಣದ ಸುಮಾರು 25 ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 3 ಸಾವಿರ ರೂ. ದಂಡ ಹಾಕಿದ್ದಾರೆ. ಜಿಲ್ಲಾ ಸಮಾಜ ಕಾರ್ಯಕರ್ತ ರವಿರಾಜ್ ಜಿ.ಕೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ್ ಆಚಾರ್, ಯಕ್ಷರೋಗ ನಿಯಂತ್ರಣ ಮೇಲ್ವಿಚಾರಕ ಚಂದ್ರಪ್ಪ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಪೊಲೀಸ್ ಇಲಾಖೆಯ ವಸಂತ್ ಹಾಗೂ ಪಿಹೆಚ್ಸಿಓ ಗೀತಾ, ಬಿ.ಪಿ.ಎಂ ನಿಕೀತ್ರಾಜ್ ಇದ್ದರು.