13 ವರ್ಷದ ಬಾಲಕಿ ಹೃದಯಾಘಾತಕ್ಕೆ ಬಲಿ!
– ಶಾಲೆಗೆ ಹೋಗುವಾಗಲೇ ಕುಸಿದು ಬಿದ್ದು ಸಾವು
– ಭದ್ರಾವತಿ: ಯುವಕನ ಬರ್ಬರ ಹತ್ಯೆ: ಮೂವರು ಅರೆಸ್ಟ್!
– ಬೆಂಗಳೂರು: ನಟಿ ಹೇಮಾ ಚೌಧರಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು!
NAMMUR EXPRESS NEWS
ಮೂಡಿಗೆರೆ: ಶಾಲಾ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಜೋಗಣ್ಣನಕೆರೆ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ (13) ಎನ್ನುವ ಮೃತ ವಿದ್ಯಾರ್ಥಿನಿ ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬೆಳಗ್ಗೆ ಶಾಲೆಗೆ ಹೋಗುವಾಗ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗ ಮಧ್ಯೆ ಅಸುನೀಗಿದ್ದಾಳೆ. ಮೂಡಿಗೆರೆ ಎಂ.ಜಿ.ಎಂ. ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಹೃದಯಾಘಾತ ಎಂದು ದೃಢಪಟ್ಟಿದೆ. ಇತ್ತೀಚಿಗೆ ಮಕ್ಕಳು, ಯುವಕರು ಹೆಚ್ಚಿನ ಹೃದಯಾಘಾತಕ್ಕೆ ಮೃತಪಡುತ್ತಿರುವ ಪ್ರಕರಣದ ನಡುವೆ ಈ ಪ್ರಕರಣ ಗಮನ ಸೆಳೆದಿದೆ.
ಭದ್ರಾವತಿ: ಯುವಕನ ಬರ್ಬರ ಹತ್ಯೆ: ಮೂವರು ಅರೆಸ್ಟ್!
ಭದ್ರಾವತಿ : ವೈನ್ ಶಾಪ್ ಒಂದರಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಸ್ ನಿಲ್ದಾಣ ಸಮೀಪದ ಬಾರ್ ಒಂದರಲ್ಲಿ ಈ ಘಟನೆ ಸಂಭವಿಸಿದೆ. ಹೇಮಂತ್ ಅಲಿಯಾಸ್ ಕರಿ ಚಿಕ್ಕಿ ಹತ್ಯೆಯಾದವನು. ನ್ಯೂ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಸತ್ಯಾನಂದ, ಮುಬಾರಕ್, ಖಲೀಲ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ನಟಿ ಹೇಮಾ ಚೌಧರಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು!
ಬ್ರೇನ್ ಹ್ಯಾಮರೇಜ್ ಸಮಸ್ಯೆಯಿಂದ ಹಿರಿಯ ನಟಿ ಹೇಮಾ ಚೌಧರಿ ಬಳಲುತ್ತಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟಿ ಹೇಮಾ ಅವರ ಮಗ ಐರ್ಲೆಂಡ್ನಲ್ಲಿ ಇದ್ದಾರೆ. ಮಗನಿಗೆ ವಿಷಯ ತಿಳಿಸಿದ್ದು ತಕ್ಷಣ ಬೆಂಗಳೂರಿಗೆ ಬರ್ತಿದ್ದಾರಂತೆ ಆಸ್ಪತ್ರೆಯಲ್ಲಿರು ಹೇಮಾ ಚೌಧರಿ ಅವರ ಸ್ಥಿತಿ ಕೊಂಚ ಗಂಭೀರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಲಾಗಿದೆ.
ಇತ್ತೀಚಿಗೆ ಲೀಲಾವತಿ ಅವರ ಪುಣ್ಯತಿಥಿ ಮುಗಿಸಿಕೊಂಡು ಬಂದ ನಂತ್ರ ಹೇಮಾ ಚೌದರಿ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯ ಉಂಟಾಗಿದೆ. ಹೇಮಾ ಚೌದರಿ ಸ್ಥಿತಿ ಕೂಡ ಗಂಭೀರವಾಗಿದೆ. ಹೇಮಾ ಚೌಧರಿ ದಕ್ಷಿಣ ಭಾರತದ ಹೆಸರಾಂತ ಕಲಾವಿದೆ ಆಗಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಹೇಮಾ ಕೂಚಿಪುಡಿ ಕಲಾವಿದೆಯೂ ಆಗಿದ್ದಾರೆ.