ವಿದ್ಯಾರ್ಥಿಯ ಜೊತೆ ಶಿಕ್ಷಕಿ ಫೋಟೋ ಶೂಟ್: ಭಾರೀ ಚರ್ಚೆ!
– ರಿಪ್ಪನ್ ಪೇಟೆ ಬಳಿ ಅಪಘಾತ: ಯುವಕ ಸಾವು!
– ಪಂಪಾ ನದಿಯಲ್ಲಿ ಮುಳುಗಿ ಮಾಲಾಧಾರಿಗಳ ಸಾವು!
– ಸಾಗರ: ಅಭಯಾರಣ್ಯಕ್ಕೆ ವಾಪಸ್ಸಾದ ಆನೆಗಳು!
– ಕರೋನಾ ಪಾಸಿಟಿವ್ ರೋಗಿಗಳಿಗೆ 7 ದಿನ ಹೋಮ್ ಐಸೊಲೇಷನ್!
– ಒಂದೇ ದಿನದಲ್ಲಿ ಏಳು ಜನಕ್ಕೆ ಕಚ್ಚಿದ ಹುಚ್ಚು ನಾಯಿ!
NAMMUR EXPRESS NEWS
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಯ ಜೊತೆ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋಗಳು ಅಸಭ್ಯವಾಗಿದ್ದು ಇದನ್ನು ಗಮನಿಸಿದ ವಿದ್ಯಾರ್ಥಿಯ ಪೋಷಕರು ಶಾಲೆಯ ಬಳಿ ಬಂದು ಆಕ್ರೋಶ ವ್ಯಕ್ತ ಪಡಿಸಿದ್ದು, ಶಾಲೆಗೆ ಬಿಇಒ ಮತ್ತು ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ರಿಪ್ಪನ್ ಪೇಟೆ ಬಳಿ ಅಪಘಾತ: ಯುವಕ ಸಾವು!
ರಿಪ್ಪನ್ ಪೇಟೆ: ಆನಂದಪುರ- ರಿಪ್ಪನ್ ಪೇಟೆ ರಸ್ತೆಯಲ್ಲಿ ರಿಪ್ಪನ್ ಪೇಟೆಯ ವಡಗೆರೆ ಶಾಲೆಯ ಮುಂಭಾಗದಲ್ಲಿ ಆನಂದಪುರದ ಕಡೆಯಿಂದ ಬರುತ್ತಿದ್ದ ಯುವಕನ ಬೈಕಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿ ಯುವಕ ನೆಲಕ್ಕೆ ಬಿದ್ದು, ತಲೆ ರಸ್ತೆಗೆ ಅಪ್ಪಳಿಸಿದ ಕಾರಣ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಮೃತಪಟ್ಟ ಯುವಕನನ್ನು ಆವಿನಹಳ್ಳಿಯ ಗುರುವಂತೆ ಗ್ರಾಮದ ನವೀನ್ ಕುಮಾರ್ ಜಿ ಕೆ. ಎಂದು ಡ್ರೈವಿಂಗ್ ಲೈಸೆನ್ಸ್ ನೋಡಿ ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿಯ ಹೊರತು ಅಪಘಾತದ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಪೋಲಿಸ್ ತನಿಖೆ ನಡೆಯುತ್ತಿದೆ.
ಪಂಪಾ ನದಿಯಲ್ಲಿ ಮುಳುಗಿ ಮಾಲಾಧಾರಿಗಳ ಸಾವು!
ಚನ್ನೈ: ಮೂಲದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪನ ದರ್ಶನದ ನಂತರ ಪಂಪಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದು ಕಾಲುಜಾರಿ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ. ಮೃತರು ಚೆನ್ನೈನ ಅವಿನಾಶ್(21) ಮತ್ತು ಸಂತೋಷ್(19) ಎಂದು ಗುರುತಿಸಲಾಗಿದೆ. ಒಬ್ಬರು ನೀರಿಗಿಳಿದು ಕಾಲುಜಾರಿ ಮುಳುಗುತ್ತಿದ್ದಾಗ ರಕ್ಷಣೆಗೆ ಬಂದ ಇನ್ನೊಬ್ಬರೂ ಮುಳುಗಿ ಮೃತಪಟ್ಟಿರುತ್ತಾರೆ.
ಅಭಯಾರಣ್ಯಕ್ಕೆ ವಾಪಸ್ಸಾದ ಆನೆಗಳು!
ಸಾಗರ: ಸಾಗರದ ಸುತ್ತ ಮುತ್ತಲಿನ ಗಿಳಾಲಗುಂಡಿ, ಕೋಣೆ, ಹೊಸೂರು, ತಪ್ಪೂರು, ಬೈರಾಪುರ ಭಾಗಗಳಲ್ಲಿ ಹೊಲದಲ್ಲಿ ಬೆಳೆ ಹಾಳು ಮಾಡಿ ರೈತರನ್ನು ಕಂಗಾಲು ಮಾಡುತ್ತಿದ್ದ ಆನೆಗಳನ್ನು, ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಿಂದ ಮರಳಿ ಕಾಡಿಗೆ ಸೇರಿಸಿದ್ದಾರೆ. ಸಾಗರ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಮಾವುತರಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.
ಕೊರೋನಾ ಪಾಸಿಟಿವ್ ರೋಗಿಗಳಿಗೆ ಏಳು ದಿನ ಹೋಮ್ ಐಸೊಲೇಷನ್!
ಬೆಂಗಳೂರು: ಇತ್ತೀಚೆಗೆ ಕೊರೋನಾ ಪಾಸಿಟಿವ್ ಸಂಖ್ಯೆ ಮತ್ತೆ ಏರುತ್ತಿದ್ದು ರಾಜ್ಯದಲ್ಲಿ ಜೆಎನ್1 ರೂಪಾಂತರದ ಮೂವತ್ತಾರು ಪ್ರಕರಣಗಳು ಸಕ್ರಿಯವಾಗಿವೆ. ಈ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಪ್ರಸ್ತುತ ಅತಂಕಕಾರಿ ಪರಿಸ್ಥಿತಿ ಇಲ್ಲ. ಸರ್ಕಾರ ಉತ್ತಮ ಸಿದ್ಧತೆಯನ್ನು ಹೊಂದಿದೆ. ಆದರೆ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೊರೋನಾ ಪಾಸಿಟಿವ್ ಬಂದಲ್ಲಿ ಏಳು ದಿನಗಳ ಹೋಮ್ ಐಸೊಲೇಷನ್ ಅನ್ನು ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ.
ಒಂದೇ ದಿನದಲ್ಲಿ ಏಳು ಜನಕ್ಕೆ ಕಚ್ಚಿದ ಹುಚ್ಚು ನಾಯಿ!
ಶಿವಮೊಗ್ಗ: ಎಲ್ಲಾ ಕಡೆಯು ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಶಿವಮೊಗ್ಗದ ವಿಶಾಲ್ ಮಾರ್ಟ್ ಬಳಿ ಅಡ್ಡಾಡುತಿದ್ದ ನಾಯಿಯೊಂದು ಒಂದೇ ದಿನದಲ್ಲಿ ಏಳು ಜನಕ್ಕೆ ಕಚ್ಚಿದೆ. ಕಚ್ಚಿಸಿಕೊಂಡವರೆಲ್ಲ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೇರೆ ನಾಯಿಗಳಿಗೂ ಕಚ್ಚುವ ಮೂಲಕ ಹುಚ್ಚು ಹರಡಿಸುತ್ತಿರುವ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಜೊತೆಗೆ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹೀಗೆ ಕಚ್ಚುತ್ತಿದ್ದರೆ ಮುಂದೇನು ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು, ಸ್ಥಳೀಯ ಇಲಾಖೆಗಳು ಗಮನ ವಹಿಸುತ್ತಿಲ್ಲ ಎಂಬುದರ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.