ಪಾಳುಬಿದ್ದ ಮನೆಯಲ್ಲಿ ಐದು ನಿಗೂಢ ಅಸ್ಥಿಪಂಜರ ಪತ್ತೆ!
-ಚಿತ್ರದುರ್ಗದಲ್ಲಿ ಏನಿದು ನಿಗೂಢ ರಹಸ್ಯ !!?
– ಅಂತರ್ ಜಾತಿ ವಿವಾಹ ಊರಿನವರ ಬಹಿಷ್ಕಾರ!
– ಕಾಲು ಜಾರಿ ಕಟ್ಟೆ ಇಲ್ಲದ ಬಾವಿಗೆ ಬಿದ್ದ ವ್ಯಕ್ತಿ!
– ಮನೆ ಹಿತ್ತಲಲ್ಲಿ ಗಾಂಜಾ ಕೃಷಿ: ಮಾಲು ಸಮೇತ ಅರೆಸ್ಟ್!
– ಉಳ್ಳಾಲದಲ್ಲಿ ಚಿಕ್ಕಮಗಳೂರಿನ ಮೂವರು ನೀರು ಪಾಲು!
NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿವೆ. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪಾಳುಬಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಅಸ್ಥಿಪಂಜರಗಳು ಸಿಕ್ಕಿವೆ. ಈ ವಿಚಾರವಾಗಿ ಪವನ್ ಕುಮಾರ್ ಎಂಬುವರು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಮಾತನಾಡಿದ್ದು, ಈ ಮನೆಯಲ್ಲಿ ಇವರ ಸಂಬಂಧಿ ನಿವೃತ್ತ ಇಂಜಿನಿಯರ್ ಆಗಿದ್ದ ಜಗನ್ನಾಥರೆಡ್ಡಿ,(80) ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ.
ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ನಾವು ಕಂಡಿಲ್ಲ. ಜಗನ್ನಾಥರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ. ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಕೊಲೆಯಾಗಿದ್ದಾರೆಯೇ? ಎಂಬುವುದರ ಕುರಿತು ಇನ್ನಷ್ಟೇ ತಿಳಿಯಬೇಕಿದೆ. ಸಧ್ಯ ಅಸ್ಥಿಪಂಜರಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲು ತೀರ್ಮಾನಿಸಲಾಗಿದೆ. ಪೊಲೀಸರ ಸೂಕ್ತ ತನಿಖೆ ಬಳಿಕವಷ್ಟೇ ಐದು ಅಸ್ಥಿಪಂಜರಗಳ ಹಿನ್ನೆಲೆ ಗೊತ್ತಾಗಲಿದೆ. ಈ ಬಗ್ಗೆ ಡಿವೈಎಸ್ಪಿ ಪಿ.ಅನಿಲ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ.
ಉಳ್ಳಾಲದಲ್ಲಿ ಮೂವರು ನೀರು ಪಾಲು!
ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಆಟವಾಡಲು ಹೋದ ಮೂವರು ಸಮುದ್ರದ ಪಾಲಾಗಿದ್ದಾರೆ. ಉಳ್ಳಾಲ ದರ್ಗಾದ ಸಂದರ್ಶನಕ್ಕೆ ಬಂದ ಮೂವರು ಸಂದರ್ಶನದ ನಂತರ ಸಮುದ್ರಕ್ಕೆ ತೆರಳಿದ್ದಾರೆ. ಅಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ಸಿಲುಕಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಇವರು ಬಷೀರ್(23), ಸಲ್ಮಾನ್(19), ಸೈಫ್ ಆಲಿ(27) ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ಇವರು ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾಗ ತಕ್ಷಣವೇ ಹತ್ತಿರದಲ್ಲಿದ್ದ ಮೊಗವೀರ ಜೀವರಕ್ಷಕ ಸದಸ್ಯರು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಸಲ್ಮಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಶೀರ್ ಸಮುದ್ರದಲ್ಲಿ ಇನ್ನೂ ಪತ್ತೆಯಾಗಿಲ್ಲ. ಸಧ್ಯ ಸೈಫ್ ಆಲಿ ಚಿಕಿತ್ಸೆ ಪಡೆಯುತ್ತಿದ್ದು ಉಳ್ಳಾಲ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂತರ್ ಜಾತಿ ವಿವಾಹ ಊರಿನವರ ಬಹಿಷ್ಕಾರ!
ಶಿವಮೊಗ್ಗ: ಜಿಲ್ಲೆ ಚೋರಡಿಯ ಹೊರಬೈಲ್ನಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಪರಿಶಿಷ್ಟ ವರ್ಗದ ಯುವತಿಯನ್ನ ಮದುವೆಯಾಗಿದ್ದ ಸಮುದಾಯವೊಂದು ಬಹಿಷ್ಕಾರ ಹಾಕಿದೆ. ಜೋಗಿ ಸಮುದಾಯದ ಯುವಕ ಹಾಗೂ ಪರಿಶಿಷ್ಟ ಜಾತಿಯ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯಾಗಿ ಆರಂಭದಲ್ಲಿ ಯುವತಿಯನ್ನ ಕುಟುಂಬಸ್ಥರು ಯಾವುದೇ ಸಮಸ್ಯೆ ಇಲ್ಲದೆ ಮನೆ ಸೇರಿಸಿಕೊಂಡಿದ್ದರು. ಆದರೆ ಊರಿನವರು, ಪ್ರೀತಿಸಿ ಮದುವೆಯಾದ ಯುವಕ ಯುವತಿ ಹಾಗೂ ಅವರ ಪರಿವಾರವನ್ನು ನಾಲ್ಕು ತಿಂಗಳಿನಿಂದ ದೂರವಿಟ್ಟಿದ್ದಾರೆ.
30 ಮನೆಗಳು ಸೇರಿ ಸಭೆಯೊಂದನ್ನು ಕರೆದು ಸಂತ್ರಸ್ತ ಕುಟುಂಬದವರನ್ನ ಹಾಗೂ ಅವರಿಗೆ ಹೆಗಲು ಕೊಟ್ಟಿರುವ ಕುಟುಂಬದ ಸಂಬಂಧಿಕರನ್ನ ಮಾತನಾಡಿಸಬಾರದು. ಹಾಗೆ ಮಾತನಾಡಿಸಿದರೆ 1000 ರೂಪಾಯಿ ದಂಡ ಹಾಕುವುದು ಮತ್ತು ಕುಟುಂಬಸ್ಥರನ್ನ ಮಾತನಾಡಿಸಿದವರ ಬಗ್ಗೆ ಮಾಹಿತಿ ಕೊಟ್ಟರೆ ಐನೂರು ರೂಪಾಯಿ ಬಹುಮಾನ ಕೊಡುವುದು ಎಂದು ಮೀಟಿಂಗ್ನಲ್ಲಿ ತೀರ್ಮಾನಿಸಿದ್ದಾರೆ. ಕೆಲಸಕ್ಕೂ ಕರೆಯದ, ಮನೆಗೂ ಬಾರದ, ಊರು ಮನೆಯಲ್ಲಿ ಬದುಕುವುದು ಕಷ್ಟವಾಗತೊಡಗಿದಾಗ ಇಡೀ ಕುಟುಂಬಸ್ಥರು ಖಿನ್ನತೆಗೆ ಜಾರಿದ್ದಾರೆ.
ಒಂದೂರಿನ ಜನರನ್ನ ಎದುರುಹಾಕಿಕೊಂಡು ಬದುಕುವುದು ಹೇಗೆ ಎಂದು ಅರಿಯದೇ ಇದ್ದಾಗ ಯುವಕ ಯುವತಿ ನೆರವಿನ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಮೇರೆಗೆ ಜಿಲ್ಲಾಡಳಿತ ತಹಸೀಲ್ದಾರ್, ಡಿವೈಎಸ್ಪಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ಹೊರಬೈಲ್ಗೆ ಕಳುಹಿಸಿತ್ತು. ಇದೀಗ ಊರಿನ ಜನರ ಸಭೆ ಸೇರಿಸಿ ಕಾನೂನಿನ ಅಸ್ತ್ರವನ್ನು ಮುಂದಿಟ್ಟಿದ್ದಾರೆ. ಸದ್ಯದಲ್ಲಿ ಹೊರಬೈಲ್ನಲ್ಲಿ ಮನೆದೇವರ ಹಬ್ಬವಿದೆ. ಆ ಹಬ್ಬದಲ್ಲಿ ಸಾಮೂಹಿಕ ಪೂಜೆ ನಡೆಯುತ್ತದೆ. ಸಮುದಾಯದ ಹಬ್ಬದಲ್ಲಿ ಸಂತ್ರಸ್ತ ಕುಟುಂಬವೂ ಪಾಲ್ಗೊಳ್ಳಬೇಕಿದೆ. ಹಾಗೆ ಆದಲ್ಲಿ ಕಾನೂನಿನ ಹೋರಾಟಕ್ಕೆ ಸಾರ್ಥಕತೆ ಸಿಗಲಿದೆ.
ತೋಟದ ಕೆಲಸದ ಸಮಯ ಕಾಲು ಜಾರಿ ಕಟ್ಟೆ ಇಲ್ಲದ ಬಾವಿಗೆ ಬಿದ್ದ ವ್ಯಕ್ತಿ!
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನೀಚಡಿಯಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದ ಪರಿಣಾಮ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ತೋಟದ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ 55 ವರ್ಷದ ಬಂಗಾರಪ್ಪನವರು ಕಾಲು ಜಾರಿ ಆಯ ತಪ್ಪಿ ಸೀದಾ ಕಟ್ಟೆ ಇಲ್ಲದ ಬಾವಿಗೆ ಬಿದ್ದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಅಲ್ಲಿಗೆ ಬಂದಿದ್ದಾರೆ. ಮೃತರನ್ನು ಜಿಗಳೆ ಮನೆಯ ಬಂಗಾರಪ್ಪ ಎಂದು ಗುರುತಿಸಲಾಗಿದ್ದು, ಆನಂತರ ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಈ ಪ್ರಕರಣ ಆನಂದಪುರ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಗಿದೆ.
ಮನೆ ಹಿತ್ತಲಲ್ಲಿ ಗಾಂಜಾ ಕೃಷಿ: ಮಾಲು ಸಮೇತ ಅರೆಸ್ಟ್!
ಶಿವಮೊಗ್ಗ : ಈ ನಡುವೆ ಗಾಂಜಾ ಪ್ರಕರಣಗಳು ಹೆಚ್ಚುತ್ತಿದ್ದು ಎಷ್ಟು ಬ್ರೇಕ್ ಹಾಕಿದರೂ ನಿಲ್ಲದಂತಾಗಿವೆ. ಇದೀಗ ಮಾದಕ ವಸ್ತುಗಳನ್ನು ರೋಡ್ ಸೈಡ್ ಮಾರಾಟ ಮಾಡುವಷ್ಟು ಮುಂದುವರೆದಿದ್ದಾರೆ. ಪೊಲೀಸರು ಜಪ್ತು ಮಾಡಿ ರೋಡ್ ಸೈಡ್ನಲ್ಲಿ ಮಾರಾಟ ಮಾಡುವ ಆರೋಪಿಗಳನ್ನ ಅರೆಸ್ಟ್ ಮಾಡುತ್ತಿದ್ದಾರೆ. ಈ ವಾರದಲ್ಲಿಯೇ ತುಂಗಾನಗರ ಪೊಲೀಸರು ಎರಡು ಕೇಸ್ ಹಿಡಿದಿದ್ದಾರೆ. ಈ ಹಿಂದೇ ಶಿವಮೊಗ್ಗದಲ್ಲಿ ಎಸ್ಪಿ ಲಕ್ಷ್ಮೀಪ್ರಸಾದ್ ಜಿಲ್ಲೆಗೆ ಬರುತ್ತಿದ್ದ ಲೋಡ್ ಗಟ್ಟಲೇ ಗಾಂಜಾ ಮಾಲನ್ನ ಸೀಜ್ ಮಾಡಿದ್ದರು. ಅವರ ನಂತರ ಬಂದ ಎಸ್ಪಿ ಮಿಥುನ್ ಕುಮಾರ್ ಕೂಡ ಮಾದಕವಸ್ತುಗಳ ವಿಚಾರದಲ್ಲಿ ಜಿರೋ ಟಾಲರೆನ್ಸ್ ಎಂದಿದ್ದಾರೆ.
ಮರಾಠಿ ಕ್ಯಾಂಪ್ನ ಯುವಕನನ್ನ ಅರೆಸ್ಟ್ ಮಾಡಿದ್ದ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಇದೀಗ ಮನೆ ಹಿತ್ತಲಲ್ಲಿ ಗಾಂಜಾ ಕೃಷಿ ಮಾಡ್ತಿದ್ದ ನಜ್ರತ್ ನನ್ನು ಅರೆಸ್ಟ್ ಮಾಡಿದ್ದಾರೆ. ಮಳಲಿಕೊಪ್ಪ ಗ್ರಾಮದ ವಾಸಿ ನಜರತ್ ತನ್ನ ಮನೆಯ ಹಿಂಬದಿ ಜಾಗದಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನ ಬೆಳೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳ ತಂಡವು ಪರಿಶೀಲನೆ ನಡೆಸಿದೆ. ದಿನಾಂಕ 28-12-2023 ರಂದು ನಜರತ್ ಅಲಿಯಾಸ್ ನಜ್ರನನ್ನು ಅರೆಸ್ಟ್ ಮಾಡಿದ್ದು, ಅಂದಾಜು ಮೌಲ್ಯ 1,20,00/- ರೂ ಗಳ 12 ಕೆಜಿ 350 ಗ್ರಾಂ ತೂಕದ ಹಸಿ ಗಾಂಜಾ ಗಿಡವನ್ನು ಜಪ್ತು ಮಾಡಿದ್ದಾರೆ. ಮಳಲಿಕೊಪ್ಪ ಗ್ರಾಮದ ನಿವಾಸಿ ನಜ್ರ ವಿರುದ್ಧ ಕಲಂ 8(ಬಿ), 20 (ಎ)(i), 25 NDPS ಕಾಯ್ದೆ ಅಡಿ ಕೇಸ್ ದಾಖಲಾಗಿದೆ.