14ರ ಬಾಲಕಿ ಜತೆ 38ರ ಡ್ರೈವರ್ ಲವ್!
– ಸ್ಕೂಲ್ ಬಸ್ ಚಾಲಕನ ಪ್ರೇಮದಾಟ: ವಿದ್ಯಾರ್ಥಿನಿ ಜತೆ ಆತ್ಮಹತ್ಯೆ!
– ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಘಟನೆ
ಬಂದೂಕು ಹಿಡಿದು ಹೆದ್ದಾರಿಯಲ್ಲಿ ಹುಚ್ಚಾಟ..!
– ಏರ್ಗನ್ನಿಂದ ಗಾಳಿಯಲ್ಲಿ ಗುಂಡು.!
– ಚಿಕ್ಕಮಗಳೂರು ಸಿರಗನಹಳ್ಳಿಯ ಇಬ್ಬರು ಅರೆಸ್ಟ್
NAMMUR EXPRESS NEWS
ಚಿಕ್ಕಮಗಳೂರು: ಸ್ಕೂಲ್ ಬಸ್ ಚಾಲಕನೊಬ್ಬ ಎಂಟನೇ ತರಗತಿ ವಿದ್ಯಾರ್ಥಿನಿ ಜತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರಂತ ಎಂದರೆ ಸಣ್ಣ ವಯಸ್ಸಿನ ಬಾಲಕಿಯನ್ನು ಪ್ರೇಮದಾಟದಲ್ಲಿ ಸಿಲುಕಿಸಿ ಅಂತಿಮವಾಗಿ ತಾನು ಸತ್ತಿದ್ದಲ್ಲದೆ ಆಕೆಯ ಬಾಳಿಗೂ ಕೊಳ್ಳಿ ಇಟ್ಟಿದ್ದಾನೆ. ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ. ಶಾಲೆ ಬಸ್ನ ಡ್ರೈವರ್ ಸಂತೋಷ್ (38) ಕೇವಲ 14 ವರ್ಷದ ಬಾಲಕಿ ಜಾಹ್ನವಿಯನ್ನು ತನ್ನ ಜತೆಗೆ ಬಲಿ ಕೊಟ್ಟಿದ್ದಾನೆ. ಅವರಿಬ್ಬರೂ ರೈಲಿಗೆ ಅಡ್ಡಲಾಗಿ ನಿಂತು ಪ್ರಾಣ ಬಿಟ್ಟಿದ್ದಾರೆ.
ಏನಿದು ಘಟನೆ?
ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಜಾಹ್ನವಿ ವ್ಯಾಸಂಗ ಮಾಡುತ್ತಿದ್ದಳು. 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಜಾಹ್ನವಿಯನ್ನು ಪ್ರೀತಿಸುವಂತೆ ಬಸ್ ಡ್ರೈವರ್ ಸಂತೋಷ ಪೀಡಿಸುತ್ತಿದ್ದ ಎನ್ನಲಾಗಿದೆ. ಸಂತೋಷ ಕಳೆದ ಮೂರು ವರ್ಷಗಳಿಂದ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆಗಿನಿಂದಲೇ ಎಳೆ ಹುಡುಗಿಯ ಮೇಲೆ ಕಣ್ಣಿಟ್ಟಿದ್ದ ಸಂತೋಷ. ಬಸ್ ಡ್ರೈವರ್ ಕಿರುಕುಳದ ಬಗ್ಗೆ ಈ ಹಿಂದೆಯೇ ಪೋಷಕರು ಶಾಲೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.
ಬಂದೂಕು ಹಿಡಿದು ಹೆದ್ದಾರಿಯಲ್ಲಿ ಹುಚ್ಚಾಟ..!
ಶಿವಮೊಗ್ಗ: ನಗರದ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ ಆತಂಕ ಸೃಷ್ಟಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗ ತುಂಗಾ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಸಿರಗನಹಳ್ಳಿಯ ಹರ್ಷ ಪಟೇಲ್ (23) ಮತ್ತು ಅಜ್ಜಂಪುರದ ಅಭಿಷೇಕ್ (23) ಬಂಧಿತರು. ಏನಿದು ಘಟನೆ?: ಡಿ.26ರಂದು ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಮೀಪ ಶಿವಮೊಗ್ಗ-ಭದ್ರಾವತಿ ಹೆದ್ದಾರಿಯಲ್ಲಿ ನಡೆದಿದ್ದ ಘಟನೆ. ಕಾರಿನಲ್ಲಿ ಬಂದಿದ್ದ ಆರೋಪಿಗಳು ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಕೆಳಗಿಳಿದು ಕುಣಿದು ಕುಪ್ಪಳಿಸಿದ್ದರು.
ಈ ವೇಳೆ ಇನ್ನೊಬ್ಬ ಆರೋಪಿ ಏರ್ ಗನ್ ಹಿಡಿದುಕೊಂಡಿದ್ದು ಅದರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಏಕಾಏಕಿ ನಡೆದ ಘಟನೆಯಿಂದ ಗುಂಡಿನ ಶಬ್ದ ಕೇಳಿ ರಸ್ತೆಯಲ್ಲಿ ಓಡಾಡುತ್ತಿದ್ದವರು ಕೆಲ ಕಾಲ ಆತಂಕಕ್ಕೀಡಾಗಿದ್ದರು. ಕೆಲವರು ಇದು ಗುಂಡಿನ ದಾಳಿ ಎಂದು ಆತಂಕದಲ್ಲಿ ಓಡಿದ್ದರು. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಬಳಿಕ ಪರಿಶೀಲನೆ ನಡೆಸಿದ್ದ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಜಾಗರೂಕತೆ ಮತ್ತು ಬೇಜವಾಬ್ದಾರಿ ತೋರಿದ ಹಿನ್ನೆಲೆ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲು ಮಾಡಿಕೊಂಡು ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಇದೀಗ ಚಿಕ್ಕಮಗಳೂರು ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.