– ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆ!
– ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟ ಬಾಣಂತಿ!
– ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ!
– ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ!
– ದಲಿತ ಯುವಕನ ಮೇಲೆ ಹಲ್ಲೆ!
NAMMUR EXPRESS NEWS
ಚಿಕ್ಕಮಗಳೂರು: ಕಡೂರು ಮೂಲದ 57 ವರ್ಷದ ನಿಂಗನಾಯಕ್ ಅವರು ಕಳೆದ ಎರಡು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಿಇಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮ್ಯಾನೇಜರ್ ನಿಂಗನಾಯಕ್ ಎಂಬುವವರು ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ವಾರದ ಹಿಂದಷ್ಟೇ ಬಿಇಒ ಕಚೇರಿಗೆ ಲೋಕಾಯುಕ್ತ ಧಾಳಿ ಮಾಡಿದ್ದು 10 ಸಾವಿರ ಹಣ ಪಡೆದಿದ್ದ ಬಿಇಒ ಹೇಮಂತ್ ರಾಜ್ ಸಿಕ್ಕಿಬಿದ್ದಿದರು. ಈ ಘಟನೆ ನಡೆದ ವಾರಕ್ಕೆ ನಿಂಗರಾಜ್ ಆತ್ಯಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟ ಬಾಣಂತಿ!
ಚಿಕ್ಕಮಗಳೂರು : ಜಿಲ್ಲೆಯ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ಸಖರಾಯಪಟ್ಟಣದ ವಡೇರಹಳ್ಳಿ ತಾಂಡ್ಯದ ರಂಜಿತಾ ಬಾಯಿ ದಾಖಲಾಗಿದ್ದರು. 01.01.2024ರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ತಡರಾತ್ರಿ ರಂಜಿತಾ ಬಾಯಿ(21) ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವಿನಿಂದ ರಂಜಿತಾ ನರಳಾಡಿ ಪ್ರಾಣಬಿಟ್ಟಿದ್ದಾರೆ. ಬಾಣಂತಿ ನರಳಾಡಿದ್ರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಹೀಗಾಗಿ ರಂಜಿತಾ ಬಾಯಿ ಸಾವನ್ನಪ್ಪಿದ್ದಾರೆ. ಮಲ್ಲೇಗೌಡ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವರ್ಷದ ಹಿಂದೆಯಷ್ಟೇ ರಂಜಿತಾ ಬಾಯಿ ಹಾಗೂ ಶಶಿಧರ್ ನಾಯಕ್ ವಿವಾಹವಾಗಿದ್ರು. ಪತ್ನಿ ಸಾವಿಗೆ ನ್ಯಾಯ ನೀಡುವಂತೆ ಮಹಿಳೆಯ ಪೋಷಕರು ಆಗ್ರಹಿಸಿದ್ದಾರೆ.
ಆಂಬ್ಯುಲೆನ್ಸ್ನಲ್ಲೇ ಗಂಡು ಮಗುವಿಗೆ ಜನ್ಮ!
ಚಿಕ್ಕಮಗಳೂರು: ಬೆಳಗೋಡು ಗ್ರಾಮದ ಮಹಿಳೆಯನ್ನ ಹೆರಿಗೆಗೆಂದು 108 ಆಂಬ್ಯುಲೆನ್ಸ್ನಲ್ಲಿ ಮೂಡಿಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. 108 ಆಂಬ್ಯುಲೆನ್ಸ್ನಲ್ಲಿ ಮಹಿಳೆಯ ಜೊತೆಗಿದ್ದ ನರ್ಸ್ ಮಂಜುಳಾ ಮತ್ತು ಚಾಲಕ ಗಂಗಾಧರ್ ಅವರ ಸಮಯ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಸಾರ್ವಜನಿಕರು ಪ್ರಶಂಸೆ ಮಾಡಿದ್ದಾರೆ. ಬೆಳಗೋಡು ಗ್ರಾಮದ ಮಹಿಳೆಯನ್ನ 108 ಆಂಬ್ಯುಲೆನ್ಸ್ನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಹಿಳೆಗೆ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿದೆ.
ಆಸ್ಪತ್ರೆ ತಲುಪಲು ಇನ್ನೂ 15 ಕಿ.ಮೀ. ದೂರವಿರುವಾಗಲೇ ಆಕೆಗೆ ನೋವು ಹೆಚ್ಚಾಗಿದ್ದರಿಂದ ಚಾಲಕ ಗಂಗಾಧರನಾಯ್ಕ ವಾಹನವನ್ನು ಅತಿವೇಗವಾಗಿ ಚಲಾಯಿಸಿದ್ದಾರೆ. ಆದರೆ, ಗರ್ಭೀಣಿ ಮಹಿಳೆಯನ್ನ ಆಸ್ಪತ್ರೆಗೆ ತಲುಪಿಸಲು ಮುಂದಾದರೂ ನೋವು ತಡೆಯಲಾಗದೆ ಮಹಿಳೆ ಕೂಗಾಡಿದ್ದಾಳೆ. ಆಗ ಬೇರೆ ದಾರಿ ಕಾಣದೆ ನರ್ಸ್ ಮಂಜುಳಾ ಆಂಬ್ಯುಲೆನ್ಸ್ನಲ್ಲೇ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಚಾಲಕ ವಾಹನವನ್ನು ನಿಲ್ಲಿಸಿದ್ದು ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತು. ತಾಯಿ ಮಗು ಆರೋಗ್ಯವಾಗಿದ್ದಾರೆಂದು ಮಹಿಳೆಯ ಜೊತೆಗಿದ್ದ ಅವರ ಪತಿ ಮಾಹಿತಿ ನೀಡಿದ್ದಾರೆ.
ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ!
ಶೃಂಗೇರಿ: KSRTC ಬಸ್ ನೊಳಗೆ ಕಳ್ಳರು ನುಗ್ಗಿ ಟ್ರೇ ಬಾಕ್ಸ್ ಹಾಗೂ ಟಿಕೆಟ್ ಮಷಿನ್ ನನ್ನು ಕದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಮೈಸೂರಿನಿಂದ ಶೃಂಗೇರಿಗೆ ಬಂದು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕ ಮೂರ್ತಿಯವರ ಟಿಕೆಟ್ ಮೆಷಿನ್ ಹಾಗೂ ಟ್ರೇ ಬಾಕ್ಸ್ ಸಮೇತ ಅದರೊಳಗಿದ್ದ 15,000 ಹಣವನ್ನು ಕಳವು ಮಾಡಲಾಗಿದೆ. ಈ ಸಂಬಂಧ ಶೃಂಗೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ರಾಷ್ಟ್ರ ಕವಿ ಕುವೆಂಪು ಬಸ್ ನಿಲ್ದಾಣದಲ್ಲಿ ಭದ್ರತೆ ದೃಷ್ಟಿಯಿಂದ ಸರಿಯಾದ ಸಿಸಿಟಿವಿ ವ್ಯವಸ್ಥೆ ಇದ್ದಿದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ.
ದಲಿತ ಯುವಕನ ಮೇಲೆ ಹಲ್ಲೆ!
ಚಿಕ್ಕಮಗಳೂರು: ರಾಜ್ಯದಲ್ಲಿ ಅಸ್ಪೃಷ್ಯತೆ ಇನ್ನೂ ಜೀವಂತವಾಗಿದೆ. ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸುವುದು, ಕುಡಿಯುವ ನೀರು, ಅಂಗನವಾಡಿ ಪ್ರವೇಶ ಹಾಗೂ ಪಡಿತರ ಪಡೆಯಲು ಅಡ್ಡಿ ಹೀಗೆ ನಾನಾ ಪ್ರಕರಣಗಳು ರಾಜ್ಯದಲ್ಲಿ ಪದೇ ಪದೇ ವರದಿಯಾಗುತ್ತಲೇ ಇವೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರ ಬೀದಿಯಲ್ಲಿ ಹೊಸ ವರ್ಷದಂದು ದಲಿತ ಯುವಕ ಮಾರುತಿ ಗೊಲ್ಲರ ಬೀದಿಗೆ ಜೆಸಿಬಿ ಜೊತೆ ಕೆಲಸಕ್ಕೆ ಬಂದಿದ್ದ. ಮಾರುತಿ ದಲಿತ ಯುವಕ ಎಂದು ತಿಳಿಯುತ್ತಿದ್ದಂತೆ ಗೊಲ್ಲರ ಬೀದಿ ನಿವಾಸಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ದಲಿತ ಯುವಕನನ್ನು ಹಿಗ್ಗಾಮುಗ್ಗ ಥಳಿಸಿ ಅವಮಾನವೀಯ ವರ್ತನೆ ತೋರಿದ್ದಾರೆ. ಹಲ್ಲೆಗೊಳಗಾದ ಯುವಕನಿಗೆ ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ಖಂಡಿಸಿ ಇಂದು ಗೊಲ್ಲರ ಬೀದಿಗೆ ತೆರಳಿ ಪ್ರತಿಭಟನೆ ನಡೆಸಲು ದಲಿತ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.