ರಾಜ್ಯದ ಕಾಫಿ ಬೆಳೆಗಾರರಿಗೆ ಗುಡ್ ನ್ಯೂಸ್
– ಹೆಚ್ಚಾಯ್ತು ಕಾಫಿಯ ದರ!
– ರೊಬಸ್ಟಾ ಕಾಫಿಗೆ ಗರಿಷ್ಠ ಬೆಲೆ!
– ಮಳೆ ಕೊರತೆಯಿಂದ ಅನ್ಯ ದೇಶಗಳಲ್ಲಿ ಉತ್ಪಾದನೆ ಕುಸಿತ!
NAMMUR EXPRESS NEWS
ಕಳಸ: ಕೃಷಿ ಚಟುವಟಿಕೆಗಳಲ್ಲಿ, ಅನಿರ್ಧಿಷ್ಟ ವಾತಾವರಣಗಳಿಂದ ಸಂಭವಿಸುವ ನೂರಾರು ತಾಪತ್ರಯಗಳ ಮಧ್ಯೆ ಜಾಗತಿಕವಾಗಿ ಲಾಭ ನಷ್ಟಗಳ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ವಿಯೆಟ್ನಾಂ ದೇಶದಲ್ಲಿ ಮಳೆಯ ಕೊರತೆಯಿಂದಾಗಿ ಕಾಫಿ ಉತ್ಪಾದನೆ ಕಡಿಮೆಯಾಗಿದೆ. ಈ ಸುದ್ದಿ ಮುಟ್ಟಿದ ಬೆನ್ನಲ್ಲೇ ರೊಬಸ್ಟಾ ಕಾಫಿ ಧಾರಣೆ ಏರುತ್ತಿದೆ. ಇದರಿಂದ ಸ್ಥಳೀಯ ಬೆಳೆಗಾರರು ಸಂತಸಗೊಂಡಿದ್ದಾರೆ. ವಿಯೆಟ್ನಾಂನಲ್ಲಿ ಸದ್ಯ ಬರ ಪರಿಸ್ಥಿತಿ ತಲೆದೋರಿದೆ. ಇದರಿಂದ ಕಾಫಿ ಉತ್ಪಾದನೆಯು ಶೇ 10ರಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಹಾಗಾಗಿ, ಅಂತರರಾಷ್ಟ್ರೀಯ ರೊಬಸ್ಟಾ ಮಾರುಕಟ್ಟೆಯಲ್ಲಿ ಕಳೆದ 15 ದಿನಗಳಿಂದ ಧಾರಣೆಯು ಏರುಗತಿಯಲ್ಲಿ ಸಾಗಿದೆ.
ಮಂಗಳವಾರ ಲಂಡನ್ ಮಾರುಕಟೆಯಲ್ಲಿ ರೊಬಸ್ಟಾ ಕಾಫಿ ಬೀಜದ ದರ ಒಂದು ಟನ್ಗೆ 3,021 ಪೌಂಡ್ (ಅಂದಾಜು ₹3.17 ) ಇದರ ಪರಿಣಾಮ ದೇಶದಲ್ಲಿ ಕಾಫಿ ಬೀಜದ ದರ ಕೆ.ಜಿಗೆ ₹255 ಆಸುಪಾಸಿನಲ್ಲಿದೆ. ಇದರಿಂದ ಬೆಳೆಗಾರರಿಗೆ ಗುಣಮಟ್ಟದ ಆಧಾರದ ಮೇಲೆ 50 ಕೆ.ಜಿ ಚೆರಿಗೆ ₹6,800ರಿಂದ ₹7,000ರ ವರೆಗೆ ಬೆಲೆ ಸಿಗುತ್ತಿದೆ. ಬ್ರೆಜಿಲ್ನ ಕೆಲವು ಪ್ರಾಂತ್ಯಗಳಲ್ಲಿಯೂ ಮಳೆ ಕೊರತೆಯಿಂದ ಅರೇಬಿಕಾ ಕಾಫಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಅರೇಬಿಕಾ ಧಾರಣೆಯೂ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
‘ಜಾಗತಿಕ ಮಟ್ಟದಲ್ಲಿ ರೊಬಸ್ಟಾ ಕಾಫಿ ಧಾರಣೆ ಯಾವ ಮಟ್ಟಕ್ಕೆ ಮುಟ್ಟಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸದ್ಯದಲ್ಲೇ ₹8 ಸಾವಿರ ತಲುಪಬಹುದು ಅಥವಾ ₹6 ಸಾವಿರಕ್ಕೂ ಕುಸಿಯಬಹುದು’ ಎಂದು ಕಳಸದ ಕಾಫಿ ವ್ಯಾಪಾರಿ ಜಾಫರ್ ಮೊಹಮ್ಮದ್ ಮಾರುಕಟ್ಟೆಯ ಅನಿಶ್ಚಿತತೆ ಬಗ್ಗೆ ವಿವರಿಸಿದರು. ವಿಯೆಟ್ನಾಂ ಮತ್ತು ಬ್ರೆಜಿಲ್ ನಲ್ಲಿ ಮಳೆ ಬಂದರೆ ದರ ಕಡಿಮೆಯಾಗುವ ಸಾಧ್ಯತೆ ಇದೆ. ಭಾರತದಲ್ಲಿ ಕಾಫಿ ಮುಖ್ಯ ವಾಣಿಜ್ಯ ಬೆಳೆಯಾಗಿದ್ದು ಈ ಮಳೆಯ ಅನಿಶ್ಚಿತತೆಯಿಂದ ಸ್ವಲ್ಪ ಮಟ್ಟಿನ ತೊಂದರೆಯಾಗಿದ್ದರೂ ಕಾಫಿ ಇಳುವರಿ ಉತ್ತಮವಾಗಿದ್ದು, ಕಾಫಿಗೆ ಉತ್ತಮ ಬೆಲೆಯೂ ಬಂದಿದೆ.