ನಟ ಯಶ್ ಜನ್ಮದಿನ; ಶಿವಮೊಗ್ಗದಲ್ಲಿ ಆಚರಣೆ ಹೇಗಿದೆ?
– ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ಬಂಧನಕ್ಕೆ ಕೋರ್ಟ್ ಆದೇಶ
– ಹುಲಿ ಉಗುರು & ಕಾಡುಪ್ರಾಣಿಗಳ ವಸ್ತುಗಳನ್ನ ವಾಪಸ್ ಕೊಡಲು ಸರ್ಕಾರದಿಂದ ಲಾಸ್ಟ್ ಚಾನ್ಸ್!
NAMMUR EXPRESS NEWS
ಶಿವಮೊಗ್ಗ: ನಟ ಯಶ್ ಹುಟ್ಟುಹಬ್ಬದ ಅಂಗವಾಗಿ ನಗರದ ವಿನೋಬ ನಗರದ ಶಿವಾಲಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಅಭಿಮಾನಿಗಳಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಿದೆ. ನಟ ಯಶ್ ಗೆ 39 ನೆ ಹುಟ್ಟು ಹಬ್ಬದ ಸಂಭ್ರಮ, ಇದರ ಅಂಗವಾಗಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ ಶಿವಾಲಯದ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳ ಸಂಘ, ಅಂಧ ಮಕ್ಕಳ ಆಶ್ರಮದಲ್ಲಿಯೂ ಸಹ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಈಗಾಗಲೇ ಅಭಿಮಾನಿಗಳಿಂದ ಕೆಲ ಆಟೋಗಳ ಮುಂಭಾಗಕ್ಕೆ ನಟ ಯಶ್ ರವರ ಪೊಟೊ ಅಳವಡಿಸಿ, ಹ್ಯಾಪಿ ಬರ್ತ್ ಡೇ ರಾಕಿಂಗ್ ಸ್ಟಾರ್ ಎಂದು ಅಭಿಮಾನ ಮೆರೆಯಲಾಗಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ಬಂಧನಕ್ಕೆ ಕೋರ್ಟ್ ಆದೇಶ
ಶಿವಮೊಗ್ಗ : ಅಕ್ರಮವಾಗಿ ಮಣ್ಣು ತೆಗೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಆರೋಪ ಸಂಬಂಧ ವರದಿ ಕೇಳಿದರೂ, ವರದಿ ನೀಡುವಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್ ಲೇಖಂಡೆ ಸುಧಾಕರ್ ವಿಳಂಬ ಮಾಡಿದ್ದಾರೆ ಎಂದು ಅವರನ್ನು ಬಂಧಿಸುವಂತೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶಿಸಿದೆ. ಮುದ್ದಣ್ಣನ ಕೆರೆಯಿಂದ 500 ಲೋಡು ಮಣ್ಣು ತೆಗೆಯಲು ಅನುಮತಿ ನೀಡಲಾಗಿತ್ತು. ಆದರೆ, ಕಾನೂನು ಬಾಹಿರವಾಗಿ 15,004 ಲೋಡ್ ಮಣ್ಣನ್ನು ತೆಗೆಯಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 71.45 ಲಕ್ಷ ರೂ. ನಷ್ಟವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತಿಯ ಕಾರ್ಯಪಾಲಕ ಇಂಜಿನಿಯರ್ ವರದಿ ಸಲ್ಲಿಸಿದ್ದರು.
ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ‘ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011’ರ ಕಲಂ 09ರ ಅಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣ ಸಂಬಂಧ ನವೆಂಬರ್ 24ರೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಸಿಇಒಗೆ ನಿರ್ದೇಶಿಸಲಾಗಿತ್ತು. ಆದರೆ, ಅವರು ಇದೂವರೆಗೂ ವರದಿ. ಹೀಗಾಗಿ, ಅವರನ್ನು ಬಂಧಿಸುವಂತೆ ನ್ಯಾಯಾಲಯ ಆದೇಶಿಸಿದೆ. ಫೆಬ್ರವರಿ 16 ರಂದು ಅವರು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕು. ತಪ್ಪದೆ ವರದಿ ಸಲ್ಲಿಸಬೇಕು. ಅಲ್ಲದೆ, 25,000 ರೂ. ದಂಡ ಕಟ್ಟಿ, ಮುಚ್ಚಳಿಕೆ ಬರೆದುಕೊಟ್ಟರೆ ಅವರನ್ನು ಬಿಡುಗಡೆ ಮಾಡಬಹುದು ಎಂದು ಆದೇಶದಲ್ಲಿ ಹೇಳಿದೆ.
ಹುಲಿ ಉಗುರು & ಕಾಡುಪ್ರಾಣಿಗಳ ವಸ್ತುಗಳನ್ನ ವಾಪಸ್ ಕೊಡಲು ಸರ್ಕಾರದಿಂದ ಲಾಸ್ಟ್ ಚಾನ್ಸ್!
ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ ವನ್ಯಜೀವಿಗೆ ಸಂಬಂಧಿಸಿದ ವಸ್ತುಗಳನ್ನ ಇಟ್ಟುಕೊಂಡಿರುವ ಪ್ರಕರಣ ಸಾಕಷ್ಟು ಸದ್ದು ಮಾಡಿದ್ದು ಮಲೆನಾಡು ಜನಪ್ರತಿನಿಧಿಗಳು ಇಂತಹ ಪ್ರಕರಣಗಳಲ್ಲಿ ಸರ್ಕಾರ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪೂರಕವಾಗಿ ಇದೀಗ ರಾಜ್ಯ ಸಚಿವ ಸಂಪುಟ ಪ್ರಮುಖವಾದ ನಿರ್ಣಯವನ್ನು ಕೈಗೊಂಡಿದೆ. ಹುಲಿ ಉಗುರು, ಆನೆ ದಂತ, ಜಿಂಕೆ ಸೇರಿ. ಅಕ್ರಮ ವಾಗಿಟ್ಟುಕೊಂಡಿರುವ ಯಾವುದೇ ವನ್ಯ ಜೀವಿಯ ಅಂಗಾಂಗ, ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಒಂದು ಬಾರಿ ಕಾಲಾವಕಾಶ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ. ಕೆಲವರು ಕಾನೂನಿನ ಅರಿವಿಲ್ಲದೆ ಇಂತಹ ಉತ್ಪನ್ನಗಳನ್ನು ತಲತಲಾಂತರದಿಂದ ತಮ್ಮ ಮನೆಯಲ್ಲಿಟ್ಟು ಕೊಂಡಿದ್ದು, 2 ಬಾರಿ ಅವಕಾಶ ನೀಡಿದರೂ ಪ್ರಮಾಣ ಪತ್ರ ಪಡೆದಿರುವುದಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸ ಲಾಗಿದ್ದು, ಇಂತಹ ವಸ್ತುಗಳನ್ನು ಸರ್ಕಾರಕ್ಕೆ ಸ್ವಯಂಪ್ರೇರಿತವಾಗಿ ಹಿಂತಿರುಗಿಸಲು ಮಾತ್ರ ಕೊನೆಯ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಅತಿ ಶೀಘ್ರದಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಿ 3 ತಿಂಗಳ ಕಾಲಾವಕಾಶ ನೀಡಲು ತೀರ್ಮಾನಿಸಲಾಗಿದೆ.
ಈ ಪ್ರಕಾರವಾಗಿ 1973ರಲ್ಲಿ ಮತ್ತು 2003ರಲ್ಲಿ ಅಧಿಕೃತ ಘೋಷಣೆ ಮಾಡಿಕೊಂಡು ಹಕ್ಕಿನ ಪ್ರಮಾಣ ಪತ್ರ ಪಡೆಯದವರು ತಮ್ಮಲ್ಲಿ ಹುಲಿ ಉಗುರು. ಆನೆ ಬಾಲದ ಉಂಗುರ, ಜಿಂಕೆಯ ಕೊಂಬು, ಆನೆ ದಂತ, ಹುಲಿ, ಜಿಂಕೆ ಚರ್ಮ, ಕಾಡೆಮ್ಮೆ ಕೊಂಬು, ಹುಲಿ, ಸಿಂಹ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಆನೆ ಸೇರಿ ಯಾವುದೇ ವನ್ಯಜೀವಿಯ ಮುಖದ ಸಂಸ್ಕರಿಸಿದ ಅಥವಾ ಸಂಸ್ಕರಿಸದ ಟ್ರೋಫಿ, ಆನೆಯ ದಂತದಿಂದ ಮಾಡಿದ ಅಲಂಕಾರಿಕ ವಸ್ತು ಇತ್ಯಾದಿಗಳು ಇದ್ದಲ್ಲಿ, ಅದನ್ನು ಸರ್ಕಾರಕ್ಕೆ ಮರಳಿಸಬೇಕಾಗುತ್ತದೆ. ಇನ್ನೂ ಈ ಸಂಬಂಧ ರಾಜ್ಯದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸದ್ಯ ಪ್ರಸ್ತಾವಾಗಿರುವ ಕಾಲಾವಕಾಶ ಮುಗಿದ ಬಳಿಕ ಯಾರಾದರೂ ಇಂತಹ ವನ್ಯಜೀವಿ ಉತ್ಪನ್ನಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರೆ, ಸಾಗಾಟ, ಮಾರಾಟ ಮಾಡಿದರೆ, ಉಡುಗೊರೆ ನೀಡಿದರೆ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.