– ಹುಲಿ ದಾಳಿಯಿಂದ ಮೂರು ಕರುಗಳು ಸಾವು!
-ಕಡೂರು: ಗ್ಯಾರೇಜ್ ನಲ್ಲಿ ಉಸಿರುಗಟ್ಟಿ ಇಬ್ಬರು ಸಾವು!
-ಜಯಪುರ: ಚಾಲಕನ ನಿಯಂತ್ರಣ ತಪ್ಪಿ ಅಯ್ಯಪ್ಪ ಮಾಲಾಧಾರಿಗಳ ಬಸ್ ಪಲ್ಟಿ!
-ಮೂಡಿಗೆರೆ: ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಆರೋಪಿ ಬಂಧನ!
-ತರೀಕೆರೆ: ಮೆಚ್ಯೂರಿಟಿ ಹಣದ ಬಿಲ್ ಮಾಡಿಕೊಡಲು ಲಂಚ!
NAMMUR EXPRESS NEWS
ಮೂಡಿಗೆರೆ: ಬಣಕಲ್ ಹೋಬಳಿಯ ಬಿ.ಹೊಸಳ್ಳಿ ದುಗ್ಗಿನಮಕ್ಕಿ ಗ್ರಾಮದಲ್ಲಿ ಹುಲಿ ದಾಳಿ ಮಾಡಿ ಮೂರು ಕರುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿ.ಹೊಸಳ್ಳಿ ಗ್ರಾಮದ ಅಶೋಕಗೌಡ ಮತ್ತು ರುದ್ರಪ್ಪಗೌಡ ಎಂಬುವವರ ಮೂರು ಕರುಗಳ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದೆ. ಘಟನೆ ನಡೆದ ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಉಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹುಲಿ ಸ್ಥಳಾಂತರಕ್ಕೆ ಸಾರ್ವಜನಿಕರ ಒತ್ತಾಯ:
ಬಿ.ಹೊಸಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ಈ ಭಾಗದ ಭಾರತೀಬೈಲ್, ಬಿ.ಹೊಸಳ್ಳಿ, ಹೊಕ್ಕಳ್ಳಿ, ಹೆಗ್ಗುಡ್ಲು ಭಾಗದಲ್ಲಿ ನೂರಕ್ಕೂ ಅಧಿಕ ದನಗಳು ಹುಲಿಯ ದಾಳಿಯಿಂದ ಸತ್ತಿದ್ದರೂ ಕೂಡ ಅರಣ್ಯ ಇಲಾಖೆ ಹುಲಿ ಸ್ಥಳಾಂತರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಹುಲಿ ಸ್ಥಳಾಂತರಕ್ಕೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರೂ ಹುಲಿ ಸೆರೆ ಹಿಡಿಯಲು ಮೀನಾಮೇಷ ಎಣಿಸುವಂತಾಗಿದೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಹೆಚ್ಚು ತಿರುಗುತ್ತಿದ್ದು ಮನುಷ್ಯರ ಮೇಲೆ ಎರಗುವ ಸಾಧ್ಯತೆಗಳು ಹೆಚ್ಚಿವೆ. ಹುಲಿಯ ದಾಳಿಯಿಂದ ಕೂಲಿ ಕಾರ್ಮಿಕರು ಶಾಲಾ ಮಕ್ಕಳು ಕೂಡ ರಸ್ತೆಯಲ್ಲಿ ಓಡಾಡಲು ಭಯ ಪಡುವಂತಾಗಿದೆ. ನಿರಂತರ ಗ್ರಾಮಗಳಲ್ಲಿ ದಾಳಿ ಮಾಡುತ್ತಿರುವ ಹುಲಿಯನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥ ಚಂದನ್ ಗೌಡ ಒತ್ತಾಯಿಸಿದ್ದಾರೆ.
ಕಡೂರು: ಗ್ಯಾರೇಜ್ ನಲ್ಲಿ ಉಸಿರುಗಟ್ಟಿ ಇಬ್ಬರು ಸಾವು!
ಕಡೂರು: ಆಟೊ ರಿಕ್ಷಾದ ಇಂಜಿನ್ ರಿಪೇರಿ ನಂತರ ಉಸಿರುಗಟ್ಟಿ ಇಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೋಡಿಕ್ಯಾಂಪ್ ನಲ್ಲಿ ನಡೆದಿದೆ. ಕಡೂರು ತಾಲ್ಲೂಕಿನ ಕಲ್ಲಾಪುರ ಗ್ರಾಮದ ತೌಫಿಕ್ (24) ಹಾಗೂ ಇರ್ಫಾನ್ (24) ಮೃತಪಟ್ಟವರು. ಪಟ್ಟಣದ ಶೆಟ್ಟಿ ಕಾಂಪೌಂಡ್ ನಲ್ಲಿರುವ ತೌಫಿಕ್ ನ ಗ್ಯಾರೇಜ್ ನಲ್ಲಿ ಆಟೊ ರಿಕ್ಷಾದ ಇಂಜಿನ್ ರಿಪೇರಿ ಮಾಡಿದ ಬಳಿಕ ಇಂಜಿನ್ ಅನ್ನು ಚಾಲನೆಯಲ್ಲೇ ಬಿಟ್ಟು ಇಬ್ಬರು ಗ್ಯಾರೇಜ್ ಒಳಗೆ ಹೋಗಿ ನಿದ್ರೆಗೆ ಜಾರಿದ್ದು, ಈ ವೇಳೆ ಇಂಜಿನ್ ನಿಂದ ಹೊರ ಸೂಸಿದ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪಟ್ಟಣದ ಪೊಲೀಸರು ಅವಘಡದಲ್ಲಿ ಸಾವನ್ನಪ್ಪಿದ ಯುವಕರಿಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಯಪುರ: ಚಾಲಕನ ನಿಯಂತ್ರಣ ತಪ್ಪಿ ಅಯ್ಯಪ್ಪ ಮಾಲಾಧಾರಿಗಳ ಬಸ್ ಪಲ್ಟಿ
ಜಯಪುರ: ಚಾಲಕನ ನಿಯಂತ್ರಣ ತಪ್ಪಿ ಅಯ್ಯಪ್ಪ ಮಾಲಾಧಾರಿಗಳ ಬಸ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟದ ಬಳಿ ನಡೆದಿದೆ. ಶೃಂಗೇರಿಯಿಂದ ಹೊರನಾಡಿಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳ ಬಸ್ ಗುಡ್ಡೇತೋಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ರಂಗಸಮುದ್ರ ಗ್ರಾಮದ 34 ಅಯ್ಯಪ್ಪ ಮಾಲಾಧಾರಿಗಳು ಶೃಂಗೇರಿಯಿಂದ ಹೊರನಾಡಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಜಯಪುರ, ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡಿಗೆರೆ: ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಆರೋಪಿ ಬಂಧನ
ಮೂಡಿಗೆರೆ: ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಬೇಲೂರು ಮೂಲದ ಇದ್ರಿಸ್ ಪಾಷಾ (33) ಬಂಧಿತ ಆರೋಪಿ. ಚಾರ್ಮಾಡಿಗೆ ಗಾಂಜಾ ಮಾರಲು ತೆರಳುತ್ತಿದ್ದ ಆರೋಪಿಯನ್ನ, ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಹೊರನಾಡು ಸಂಪರ್ಕಿಸುವ ರಸ್ತೆ ಕೊಟ್ಟಿಗೆಹಾರ ಸಮೀಪದಲ್ಲೇ 1.550 ಕೆ.ಜಿ. ಗಾಂಜಾ ಹಾಗೂ ಮಾರುತಿ ಕಾರ್ ಸಮೇತ ಅಪರಾಧ ಪೊಲೀಸರು ಬಂಧಿಸಿದ್ದಾರೆ. ಇನ್ನು ಕಾರ್ಯಾಚರಣೆಯಲ್ಲಿ CEN ಅಪರಾಧ ಪೊಲೀಸ್ ಠಾಣಾ ಪಿ.ಎಸ್.ಐ. ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್, ಹರೀಶ್, ರಮೇಶ್, ಮಹೇಂದ್ರ ಮತ್ತು ಮಂಜುನಾಥ್ ಇದ್ದರು.
ತರೀಕೆರೆ: ಮೆಚ್ಯೂರಿಟಿ ಹಣದ ಬಿಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ
ತರೀಕೆರೆ: ನಿವೃತ್ತಿ ನಂತರದ ಜಿ.ಪಿ.ಎಫ್ ಮತ್ತು ಜಿ.ಐ.ಎಸ್ ಮೆಚ್ಯೂರಿಟಿ ಹಣದ ಬಿಲ್ಲುಗಳನ್ನು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರುತಾಲೂಕಿನಲ್ಲಿ ನಡೆದಿದೆ. ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುಮಾಸ್ತ ಚಂದ್ರಶೇಖರ್ ಲೋಕಾಯುಕ್ತ ಬಲೆಗೆ ಬಿದ್ದ ವ್ಯಕ್ತಿ. ವಯೋ ನಿವೃತ್ತಿಯ ನಂತರ ಪಡೆಯುವ ಜಿ.ಪಿ.ಎಫ್ ಮತ್ತು ಜಿ.ಐ.ಎಸ್ ಗಳ ಮೆಚ್ಯೂರಿಟಿ ಬಿಲ್ಲು ಮಾಡಿಕೊಡಲು 40,000/- ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಗುಮಾಸ್ತ ಚಂದ್ರಶೇಖರ್ ಜೊತೆ ಮಾತನಾಡಿದ ಸಂಭಾಷಣೆಯನ್ನು ಆಡಿಯೋ ಮಾಡಿಕೊಂಡು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿ ಅನಿಲ್ ರಾತೋಡ್ ನೇತೃತ್ವದಲ್ಲಿ ದಾಳಿ ನಡೆಸಿ ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುಮಾಸ್ತ ಚಂದ್ರಶೇಖರ್ ಅನ್ನು ಬಂಧಿಸಲಾಗಿದೆ.