ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ 1000 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಟಿಪ್ಪರ್ ಲಾರಿ
– ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಸಾವು
– ಶೃಂಗೇರಿ: ದುರಸ್ತಿಯಾಗದ ಪೈಪ್ ಲೈನ್ ಪಟ್ಟಣಕ್ಕೆ ಕಲುಷಿತ ನೀರು ಸರಬರಾಜು
– ಚಿಕ್ಕಮಗಳೂರು : ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ಪೂರ್ಣೇಶ್ ಆಸ್ಪತ್ರೆಯಿಂದ ಎಸ್ಕೇಪ್
NAMMUR EXPRESS NEWS
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ 1000 ಅಡಿ ಪ್ರಪಾತಕ್ಕೆ ಟಿಪ್ಪರ್ ಲಾರಿ ಉರುಳಿ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ವ್ಯೂ ಪಾಯಿಂಟ್ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿ, ಮಂಜು ಕವಿದ ವಾತಾವರಣವಿದ್ದರಿಂದ ದಾರಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಉರುಳಿ ಬಿದ್ದ ರಭಸಕ್ಕೆ ಟಿಪ್ಪರ್ ಲಾರಿ ಸಂಪೂರ್ಣ ಛಿದ್ರ ಛಿದ್ರವಾಗಿದೆ. ಚಾಲಕನಿಗೆ ಸೊಂಟಕ್ಕೆ ಪೆಟ್ಟಾದ ಕಾರಣ ಅಂಬುಲೆನ್ಸ್ ಮೂಲಕ ಉಜಿರೆಯ ಧರ್ಮಸ್ಥಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಭಿಷೇಕ್, ಅರಣ್ಯ ಇಲಾಖೆ ಬೀಟ್ ಫಾರೆಸ್ಟ್ ಅಭಿಜಿತ್, ಸಮಾಜ ಸೇವಕ ಆರಿಫ್ ಹಾಗೂ ಕುಂಜಿಮೊಣು ಕಾರ್ಯಚರಣೆಯಲ್ಲಿ ಇದ್ದರು.
ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಸಾವು
ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸೋಮವಾರ ಪೇಟೆ ಪಶುವೈದ್ಯರಾಗಿದ್ದ ಶಿವಪ್ಪ ಬಾದಾಮಿ ಹೃದಯಾಘಾತದಿಂದ ಮೃತಪಟ್ಟ ವೈದ್ಯ. ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಗಮಿಸಿದ್ದ ಪಶುವೈದ್ಯ ಕ್ರಿಕೆಟ್ ಆಡಿ ಫೋಟೋ ಸೆಷೆನ್ ನಲ್ಲಿ ಪಾಲ್ಗೊಂಡು ನಂತರ ಕ್ರಿಕೆಟ್ ನೋಡುತ್ತಿದ್ದಂತೆ ಕುಳಿತಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇತರೆ ವೈದ್ಯರು ಚಿಕಿತ್ಸೆಗೆ ಮುಂದಾದರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಶಿವಪ್ಪ ಬಾದಾಮಿ ಅಕಾಲಿಕ ಮರಣಕ್ಕೆ ಪಶುವೈದ್ಯ ಲೋಕದ ಕಂಬನಿ ಮಿಡಿದಿದ್ದು, ಕ್ರೀಡಾಕೂಟವನ್ನು ಸ್ಥಗಿತಗೊಳಿಸಲಾಯಿತು. ಶಿವಪ್ಪ ಬಾದಾಮಿಯವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ದುರಸ್ತಿಯಾಗದ ಪೈಪ್ ಲೈನ್ ಪಟ್ಟಣಕ್ಕೆ ಕಲುಷಿತ ನೀರು ಸರಬರಾಜು
ಶೃಂಗೇರಿ: ಕಳೆದ 6 -7 ತಿಂಗಳಿನಿಂದ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಕಲುಷಿತಗೊಂಡಿದ್ದು, ಈ ಬಗ್ಗೆ ಮಾತ್ರ ಪಟ್ಟಣ ಪಂಚಾಯಿತಿ ಜನರ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿಲ್ಲ. ಹೌದು, ಕಳೆದ 7 ತಿಂಗಳಿನಿಂದ ಕುವೆಂಪು ಬಸ್ ನಿಲ್ದಾಣದ ಮುಂಭಾಗದಿಂದ ಹಾದು ಹೋಗಿರುವ ದೊಡ್ಡ ಪೈಪ್ ಲೈನ್ ಮಾರ್ಗ, ಸುಮಾರು 7-8 ಪೈಪ್ ಗಳು ಒಡೆದು ಹೋಗಿ ಅದನ್ನು ದುರಸ್ಥಿ ಮಾಡದೇ ಬಿಡಲಾಗಿದೆ. ಇದರಿಂದಾಗಿ ಪಟ್ಟಣದ ಜನರು, ಶಾಲೆಗಳ ವಿದ್ಯಾರ್ಥಿಗಳು ಕಲುಷಿತ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಪಟ್ಟಣದ ಹೊರವಲಯದಲ್ಲಿರುವ ವಿದ್ಯಾರಣ್ಯಪುರಕ್ಕೆ ತೆರಳುವ ಮಾರ್ಗದ ತುಂಗಾ ನದಿಯ ದಂಡೆಯಲ್ಲಿರುವ ಮೋಟಾರ್ ಶೆಡ್ ನಿಂದ ಮೂರು ಮೋಟಾರ್ ಸಹಾಯದಿಂದ ಸುಮಾರು 2 ಲಕ್ಷ ಲೀ. ಸಾಮರ್ಥ್ಯದ ನೀರಿನ ಪಂಪ್ ಸೆಟ್ ನಿಂದ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿತ್ತು.
ಈ ಪಂಪ್ ಸೆಟ್ ನಿಂದ ನೀರು ಫಿಲ್ಟರ್ ಆಗಿ ಪಟ್ಟಣದ ಹನುಮಂತನಗರದ 11 ನೇ ವಾರ್ಡಿನಲ್ಲಿರುವ ನೀರಿನ ಘಟಕಕ್ಕೆ ಸರಬರಾಜು ಆಗುತ್ತಿತ್ತು.ಅಲ್ಲಿಂದ ಪೈಪ್ ಲೈನ್ ಮೂಲಕ ಪಟ್ಟಣದ ಮಧ್ಯಭಾಗದಲ್ಲಿರುವ ಈಶ್ವರ ಗಿರಿಯಲ್ಲಿನ ದೊಡ್ಡ ಬ್ಯಾಂಕಿಗೆ ನೀರು ಸಂಗ್ರಹವಾಗಿ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿತ್ತು. ಆದರೆ, ಕುವೆಂಪು ಬಸ್ ನಿಲ್ದಾಣದ ಮುಂಭಾಗದಿಂದ ಹಾದು ಹೋಗಿರುವ ದೊಡ್ಡ ಪೈಪ್ ಲೈನ್ ಮಾರ್ಗದ ಸುಮಾರು 7-8 ಪೈಪ್ ಗಳು ಒಡೆದು ಹೋಗಿ ಅದನ್ನು ದುರಸ್ಥಿ ಮಾಡದೇ ಬಿಡಲಾಗಿದೆ, ಬದಲಿ ಮಾರ್ಗದಿಂದ ಕಲುಷಿತ ನೀರು ಈಶ್ವರ ಗಿರಿಯಲ್ಲಿನ ದೊಡ್ಡ ಟ್ಯಾಂಕಿಗೆ ಸಂಗ್ರಹವಾಗುತ್ತಿದೆ.
ಇನ್ನು ಗಾಂಧಿ ಮೈದಾನದ ಹಿಂಬಾಗದ ಕೊಳಚೆ ನೀರು, ಪಟ್ಟಣದ ಚರಂಡಿ ನೀರು ತ್ಯಾಜ್ಯಗಳು ತುಂಗಾ ನದಿ ಸೇರುವುದರಿಂದ ನೀರು ಮಲಿನಗೊಳ್ಳುತ್ತಿದೆ. ಪ್ರತಿ ನಿತ್ಯ ಹೋಟೆಲ್, ಮಾಂಸದಂಗಡಿ, ಪಟ್ಟಣದ ಮನೆಗಳ ತ್ಯಾಜ್ಯ ನೀರು ತುಂಗಾ ನದಿ ಪಾಲಾಗುತ್ತಿದೆ. ಹೀಗಿರುವಾಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೇಜಾವಾಬ್ದಾರಿತನ ತೋರಿಸಿ ಪೈಪ್ ಲೈನ್ ದುರಸ್ತಿ ಪಡಿಸದೆ ಪಟ್ಟಣದ ಜನರಿಗೆ ಕುಡಿಯುವಂತಾಗಿದೆ. ಇನ್ನಾದರು ಅಧಿಕಾರಿಗಳು ಪೈಪ್ ಲೈನ್ ದುರಸ್ತಿ ಪಡಿಸಿ ಶುದ್ದ ಕುಡಿಯುವ ನೀರು ಉಪಯೋಗಿಸುವಂತೆ ಕ್ರಮ ಕೈಗೊಳ್ಳಬೇಕಿದೆ.
ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ಪೂರ್ಣೇಶ್ ಆಸ್ಪತ್ರೆಯಿಂದ ಎಸ್ಕೇಪ್
ಚಿಕ್ಕಮಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿಯೊಬ್ಬ ಎಸ್ಕೇಪ್ ಆಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದ ಪೂರ್ಣೇಶ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಆರೋಪಿ. ಈತನ ಮೇಲೆ 4 ಹಾಫ್ ಮರ್ಡರ್, 3 ಅಸಾಲ್ಟ್, ಪೊಲೀಸ್ ಮೇಲೆ ಅಟ್ಯಾಕ್ ಸೇರಿದಂತೆ 9 ಕೇಸ್ ಗಳಿವೆ. 307 ಕೇಸ್ ನಲ್ಲಿ ವಾರಂಟ್ ಇಶ್ಯು ಆಗಿತ್ತು.
ಆದರೆ, ಕಾಡಿನ ಮರಗಳ ಮೇಲೆ ಮಲಗಿ ಪೊಲೀಸರ ಕೈಗೆ ಸಿಗದೆ ಆಟ ಆಡಿಸುತ್ತಿದ್ದ. ಕಳೆದ ನವೆಂಬರ್ ನಲ್ಲಿ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ, ಆತನ ಕಾಲಿನ ಮಂಡಿಗೆ ಫೈರಿಂಗ್ ಮಾಡಿದ್ದರು. ಫೈರಿಂಗ್ ವೇಳೆ ಪೂರ್ಣೇಶ್ ಬಲಗಾಲಿಗೆ ಗುಂಡು ತಗಲಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ನಗರದ ಮಲ್ಲೇಗೌಡ ಆಸ್ಪತ್ರೆಯಿಂದ ಮುಂಜಾನೆ ಎಸ್ಕೇಪ್ ಆಗಿದ್ದು, ಆರೋಪಿಯ ಪತ್ತೆಗೆ ಪೊಲೀಸರ ಶೋಧ ಕಾರ್ಯ ನಡೆಸುತ್ತಿದ್ದಾರೆ.