– ಕಟ್ಟಡಕ್ಕೆ ಪೇಟಿಂಗ್ ಮಾಡುವ ವೇಳೆ 3ನೇ ಮಹಡಿಯಿಂದ ಬಿದ್ದು ಯುವಕ ಸಾವು
– ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು !
– ಮರಳು ಬೇಕು, ಮರಳು ಬೇಕು! ಶಿವಮೊಗ್ಗದಲ್ಲಿ ಓಪನ್ ಆಗದ ಕ್ವಾರೆಗಳು!
NAMMUR EXPRESS NEWS
ಚಿಕ್ಕಮಗಳೂರು : ಕಟ್ಟಡಕ್ಕೆ ಪೇಟಿಂಗ್ ಮಾಡುವ ವೇಳೆ ಮೂರನೇ ಮಹಡಿಯಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಮಾರ್ಕೇಟ್ ರಸ್ತೆಯಲ್ಲಿ ನಡೆದಿದೆ. ರಘು ಸ್ಟಿಕರ್ಸ್ ನೂತನ ಕಟ್ಟಡಕ್ಕೆ ಪೇಟಿಂಗ್ ಮಾಡುವ ವೇಳೆ ಘಟನೆ ನಡೆದಿದೆ. ಕಟ್ಟಡಕ್ಕೆ ಪೇಟಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಪೈಂಟರ್ ಜಗದೀಶ್ ಮೂರನೇ ಮಹಡಿಯಿಂದ ಬಿದ್ದು ತೀವ್ರ ರಸ್ತಸ್ರಾವವಾಗಿದ್ದು, ಹಾಸನ ಜಿಲ್ಲೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ. ಯಾವುದೇ ಸುರಕ್ಷತೆ ಇಲ್ಲದೆ ಕಟ್ಟಡ ಏರಿ ಕೆಲಸ ಮಾಡುವ ವೇಳೆ ಏಕಾಏಕಿ ಹಗ್ಗ ತುಂಡಾಗಿ ಅವಘಡ ಸಂಭವಿಸಿರುವುದಾಗಿ ತಿಳಿದುಬಂದಿದೆ. ಚಿಕ್ಕಮಗಳೂರು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಜಗದೀಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ. ಜೊತೆಗೆ ಕಾರ್ಮಿಕರಿಗೆ ಭದ್ರತೆ ಪರಿಕರಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.
– ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು !
ಹೊಸನಗರ : ಕಳೆದ ಒಂದೂವರೆ ತಿಂಗಳ ಹಿಂದೆ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಾಯಗೊಂಡಿದ್ದ ವ್ಯಕ್ತಿ ಮಂಗಳೂರಿನ ವೆನ್ಹಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದ ಶ್ರೀನಾಥ್ (33) ಮೃತ ವ್ಯಕ್ತಿ. ಕಳೆದ ಡಿಸೆಂಬರ್ 2 ಕೊಳವಂಕ ಗ್ರಾಮದ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಶ್ರೀನಾಥ್ ರವರ ತಲೆ ಮತ್ತು ಕಣ್ಣಿನ ಭಾಗಕ್ಕೆ ಗಾಯವಾಗಿತ್ತು. ಸ್ಥಳೀಯರು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕರೆದೊಯ್ದು ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಕೊಡಿಸಿ ವಾಪಾಸ್ ಆಗಿದ್ದರು. ನಂತರ ಶ್ರೀನಾಥ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಸುಮಾರು 20 ದಿನಗಳ ನಂತರ ಆರೋಗ್ಯದಲ್ಲಿ ಏರುಪೇರಾಗಿ ಆಗಾಗ್ಗೆ ಜ್ವರ ಮತ್ತು ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗ ಮೆಟ್ರೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಅಲ್ಲಿನ ವೈದ್ಯರ ಸಲಹೆ ಮೇರೆಗೆ ಜ.5 ರಂದು ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದ್ದರಿಂದ ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ಶ್ರೀನಾಥ್ ಕೊನೆಯುಸಿರೆಳೆದರು. ಮೃತರು ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದು ಪತ್ನಿ, 9 ತಿಂಗಳ ಪುತ್ರ, ತಾಯಿ ಮತ್ತು ಸಹೋದರಿ, ಸಹೋದರ ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗುರುವಾರ ಮಧ್ಯಾಹ್ನದ ಸ್ವಗ್ರಾಮ ಬಸವಾಪುರದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಈ ಘಟನೆ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮರಳು ಬೇಕು, ಮರಳು ಬೇಕು! ಶಿವಮೊಗ್ಗದಲ್ಲಿ ಓಪನ್ ಆಗದ ಕ್ವಾರೆಗಳು!
ಶಿವಮೊಗ್ಗ : ಶಿವಮೊಗ್ಗದಲ್ಲಿ ಮರಳಿಗೆ ಹಾಹಕಾರ ಆರಂಭವಾಗಿದೆ. ಮರಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಅಕ್ರಮ ಸಾಗಾಟವೂ ಸಹ ಹೆಚ್ಚಾಗಿದೆ. ಮರಳು ಟೆಂಡರ್ ಕರೆಯದ ಪರಿಣಾಮ ಜನರಿಗೆ ಮರಳು ಸಿಗುತ್ತಿಲ್ಲ. ಹೀಗಾಗಿ ಡಿಮ್ಯಾಂಡ್ ಹೆಚ್ಚಾಗಿದೆ. ಈ ಸಂಬಂಧ ಕೂಡಲೇ ಮರಳು ಕ್ವಾರೆ ಟೆಂಡರ್ ಕರೆಯುವಂತೆ ಹಾಗೂ ಸರ್ಕಾರಿ ಕ್ವಾರಿಗಳ ಮೂಲಕ ಸಾರ್ವಜನಿಕರಿಗೂ ಸಹ ಮರಳನ್ನು ಒದಗಿಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿಯವರಿಗೆ ಮನವಿ ಸಲ್ಲಿಸಲಾಗಿದೆ.
ಸಾರ್ವಜನಿಕರು ಹಾಗೂ ಟಿಪ್ಪರ್, ಲಾರಿ ಮಾಲೀಕರು ಈ ಸಂಬಂಧ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಯವರಿಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಿವಮೊಗ್ಗ ನಗರ ಶಾಸಕ ಚೆನ್ನಬಸಪ್ಪ ರವರ ಸಮ್ಮುಖದಲ್ಲಿ ಮನವಿ ಸಲ್ಲಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರುವ ಮರಳು ಕ್ವಾರೆಗಳಲ್ಲಿ ಸಾರ್ವಜನಿಕರಿಗೆ ಶೇ. 50ರಷ್ಟು ಮರಳು ಒದಗಿಸಲು ಮತ್ತು ಕಾರ್ಮಿಕರನ್ನು ಸಂಕಷ್ಟದಿಂದ ಪಾರು ಮಾಡುವ ಬಗ್ಗೆ. ಕಳೆದ ಆರು ತಿಂಗಳ ಹಿಂದೆ ಕ್ಲೋಸ್ ಆಗಿದ್ದ ಮರಳು ಟೆಂಡರ್ ಅನ್ನು ಮತ್ತೆ ಕರೆದಿಲ್ಲ. ಕೆಲವೇ ಕ್ವಾರಗಳಲ್ಲಿ ಮಾತ್ರ ಮರಳು ತೆಗೆಯುತ್ತಿದ್ದು, ಸರ್ಕಾರಿ ಕಾಮಗಾರಿಗಳಿಗೆ ಮಾತ್ರ ಈ ಮರಳನ್ನು ಒದಗಿಸಲಾಗುತ್ತಿದೆ. ಹಲವಾರು ಕ್ವಾರೆಗಳು ಬಂದ್ ಆಗಿರುವುದರಿಂದಾಗಿ ಸಾರ್ವಜನಿಕರಿಗೆ ಮನೆ, ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಮರಳು ಸಿಗದೇ ಪರದಾಡುವಂತಾಗಿದೆ.
ಹಾಗೆಯೇ ಮರಳು ಕ್ವಾರೆಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದ್ದು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸಾರ್ವಜನಿಕರು ಮರಳಿನ ಅಭಾವದಿಂದಾಗಿ ನಿಗಧಿತ ಸಮಯದಲ್ಲಿ ಕೆಲಸ ಮಾಡಿಕೊಳ್ಳಲು ಆಗುತ್ತಿಲ್ಲ. ಹೊರಜಿಲ್ಲೆಗಳಿಂದ ಮರಳು ಖರೀದಿ ಮಾಡಲೂ ಆಗುತ್ತಿಲ್ಲ. ಅಲ್ಲದೇ ಜಿಲ್ಲೆಯಿಂದ ಅಕ್ರಮವಾಗಿ ಮರಳು ಬೇರೆಡೆ ಸಾಗಾಟವಾಗುತ್ತಿದೆ. ಇದರಿಂದಾಗಿ ಮರಳಿನ ಬೆಲೆಯೂ ಹೆಚ್ಚಾಗಿದ್ದು, ಕಟ್ಟಡ ನಿರ್ಮಾಣ ಮಾಡಿಸುವವರಿಗೆ ಹೊರೆಯಾಗುತ್ತಿದ್ದು, ಕಟ್ಟಡ ಕಾರ್ಮಿಕರು, ಕ್ವಾರೆಗಳ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.