ಕೊಪ್ಪ ತಾಲ್ಲೂಕು ರೈತರಿಗೆ ಮಹತ್ವದ ಮಾಹಿತಿ
– ಸೊಸೈಟಿ ಅಸಲು ಕಟ್ಟಿದರೆ ಬಡ್ಡಿ ಮನ್ನಾ
– ಏನಿದು ಯೋಜನೆ… ಎಚ್ ಎಂ ಸತೀಶ್ ಸುದ್ದಿಗೋಷ್ಠಿ
NAMMUR EXPRESS NEWS
ಕೊಪ್ಪ: ‘ಸಹಕಾರಿ ಸಂಸ್ಥೆ, ಸಹಕಾರಿ ಬ್ಯಾಂಕ್ ಗಳಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ಪಡೆದು ಸುಸ್ತಿದಾರರಾಗಿರುವ ರೈತರು ಸಾಲದ ಅಸಲು ಕಟ್ಟಿದರೆ ಬಡ್ಡಿಮನ್ನಾ ಮಾಡುವ ಆದೇಶವನ್ನು ಸರ್ಕಾರ ಮಾಡಿದ್ದು, ಇದರಿಂದ ಸಾಕಷ್ಟು ಮಂದಿ ರೈತರಿಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಲೆನಾಡಿನ ಭಾಗದ ರೈತರು ಅಡಿಕೆ ಹಳದಿಎಲೆ, ಎಲೆಚುಕ್ಕಿ ರೋಗದಿಂದ ಸಾಲ ಮರು ಪಾವತಿಸಲಾಗದೇ ಸುಸ್ತಿದಾರರಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಸುಸ್ತಿ ಸಾಲದ ಬಡ್ಡಿ ಮನ್ನಾ ಮಾಡಬೇಕು ಎಂಬುದಾಗಿ ಈ ಭಾಗದ ರೈತರ ನಿಯೋಗವು ಶಾಸಕ ಟಿ.ಡಿ.ರಾಜೇಗೌಡ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು’ ಎಂದು ತಿಳಿಸಿದರು.
‘ಫೆ.29 ರೊಳಗೆ ಸುಸ್ತಿ ಸಾಲದ ಅಸಲು ಕಟ್ಟಿದರೆ ಬಡ್ಡಿಮನ್ನಾ ಮಾಡುವ ಯೋಜನೆಯು ಅನ್ವಯವಾಗ ಲಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಯೋಜನೆ ಯಡಿ ಕೊಪ್ಪ ಪಿಕಾರ್ಡ್ ಬ್ಯಾಂಕ್ ನಲ್ಲಿ ₹28 ಲಕ್ಷ, ಕರಿಮನೆ ಪಿಕಾರ್ಡ್ ಬ್ಯಾಂಕ್ ನಲ್ಲಿ ₹4.20 ಕೋಟಿ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲ್ಲೂಕಿನ ಬ್ಯಾಂಕ್ ನಲ್ಲಿ ತಲಾ ₹1 ಕೋಟಿ ಸುಸ್ತಿ ಸಾಲವಿದೆ’ ಎಂದು ಮಾಹಿತಿ ನೀಡಿದರು. ‘ಬಡ್ಡಿಮನ್ನಾ ಮಾಡುವಂತೆ ಆದೇಶ ಮಾಡಿಸುವಲ್ಲಿ ಕ್ಷೇತ್ರದ ಶಾಸಕ ರಾಜೇಗೌಡ ಅವರು ರೈತರ ಪರವಾಗಿ ನಿಂತಿದ್ದಾರೆ’ ಎಂದರು. ಕಾಂಗ್ರೆಸ್ ಮುಖಂಡ ಡಿ.ಎಸ್.ಸತೀಶ್ ಬಸ್ರೀಕಟ್ಟೆ, ಕಾಫಿ ಬೆಳೆಗಾರ ಹೆಗ್ಗದ್ದೆ ಪ್ರಕಾಶ್ ಇದ್ದರು.