ಕಾಫಿ ನಾಡಿಗೆ 25 ಕಾಡಾನೆ ಗ್ಯಾಂಗ್ ಎಂಟ್ರಿ!
– ಬೇಲೂರು ಭಾಗದಿಂದ ಆಗಮನ: ಜನತೆಗೆ ಭಯ
– ಮಲೆನಾಡಲ್ಲಿ ಹೆಚ್ಚಿದ ಕಾಡಾನೆ -ಮಾನವ ಸಂಘರ್ಷ
NAMMUR EXPRESS NEWS
ಚಿಕ್ಕಮಗಳೂರು: ಕಾಫಿ ಜಿಲ್ಲೆಗೆ ಮತ್ತೊಮ್ಮೆ 25 ಕಾಡಾನೆಗಳ ಹಿಂಡು ದಾಂಗುಡಿ ಇಟ್ಟಿದೆ. ಕೆ.ಆರ್.ಪೇಟೆ ಮತ್ತು ಮಾವಿನಕೆರೆ ಭಾಗದಲ್ಲಿ ಬೀಡು ಬಿಟ್ಟಿದ್ದು ಜನ ಭಯಭೀತರಾಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಾಡಿನಲ್ಲಿದ್ದ 30 ಆನೆಗಳ ಹಿಂಡಿನಲ್ಲಿ 25 ಆನೆಗಳು ಚಿಕ್ಕಮಗಳೂರು ತಾಲ್ಲೂಕಿನತ್ತ ಬಂದಿವೆ. ಶನಿವಾರ ಕಾಣಿಸಿಕೊಂಡ ಈ ಆನೆಗಳ ಗುಂಪಿನಲ್ಲಿ ಮರಿಗಳೂ ಇವೆ. ಎಲ್ಲಾ ಆನೆಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಸದ್ಯ ಜನವಸತಿ ಪ್ರದೇಶದ ಸಮೀಪದಲ್ಲೇ ಆನೆಗಳಿದ್ದು, ಅವುಗಳನ್ನು ಅಲ್ಲಿಂದ ಮುಂದಕ್ಕೆ ಕಳುಹಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಹಳ್ಳಿಗಳ ಸಮೀಪ ಇರುವುದರಿಂದ ಅವುಗಳನ್ನು ಘಾಸಿಗೊಳಿಸದೆ ಮುಂದಕ್ಕೆ ಸಾಗುಹಾಕುವ ಪ್ರಯತ್ನದಲ್ಲಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ಹಿಂದೆ ಹಡಿದು ರೇಡಿಯೊ ಕಾಲರ್ ಅಳವಡಿಸಿರುವ ‘ಬೀಟಮ್ಮ’ ಎಂಬ ಹೆಣ್ಣಾನೆ ಈ ಹಿಂಡನ್ನು ಮುನ್ನಡೆಸುತ್ತಿದೆ. ರೇಡಿಯೊ ಕಾಲರ್ ಇರುವುದರಿಂದ ಅವುಗಳ ಸಂಚಾರದ ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ಸುಲಭವಾಗುತ್ತಿದೆ. ಆನೆಗಳ ಹಿಂಡು ಶನಿವಾರ ರಾತ್ರಿ ಕಾಡಿನಲ್ಲಿ ನಿಂತಿದ್ದು, ಅವುಗಳ ಸುತ್ತಲೂ ಅರಣ್ಯ ಇಲಾಖೆ ಸಿಬ್ಬಂದಿ ಕಾವಲಿದ್ದಾರೆ. ಊರಿನತ್ತ ಹೆಜ್ಜೆ ಹಾಕಿದರೆ ಕಾಡಿನತ್ತ ಅಟ್ಟಲು ಸಜ್ಜಾಗಿದ್ದಾರೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ತುಮಕೂರು ಭಾಗದಲ್ಲಿ ಕಾಡು ಆನೆಗಳ ಭಯದಿಂದ ಜನತೆ ಕಂಗಾಲಾಗಿದ್ದಾರೆ.