ಅರುಣ್ ಪುತ್ತಿಲ ಮರು ಪ್ರವೇಶಕ್ಕೆ ತೆರೆಯದ ಬಿಜೆಪಿ ಬಾಗಿಲು!
– ಪುತ್ತಿಲ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರ ತೀವ್ರ ವಿರೋಧ
– ಮುಂದುವರಿದ ಸಂಧಾನ ಮಾತುಕತೆ: ಏನಾಗುತ್ತೆ ರಾಜಕೀಯ?
NAMMUR EXPRESS NEWS
ಪುತ್ತೂರು: ಅರುಣ್ ಪುತ್ತಿಲ ಬಿಜೆಪಿಗೆ ಮರು ಸೇರ್ಪಡೆಯಾಗುವ ವಿಚಾರ ಇದೀಗ ತಿರುವು ಪಡೆದುಕೊಂಡಿದ್ದು, ಪುತ್ತಿಲ ಪಕ್ಷಕ್ಕೆ ವಾಪಾಸ್ಸಾಗುವುದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ರಾಜ್ಯ ನಾಯಕರನ್ನು ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಪುತ್ತಿಲ ಅವರು ಭೇಟಿ ಮಾಡಿದ್ದರು. ಅತ್ತ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು ಸೇರಿದಂತೆ ಪುತ್ತಿಲ ಪರಿವಾರದ ನಾಯಕರು ಕೂಡ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮರು ಸೇರ್ಪಡೆ ಹಾದಿಯನ್ನು ಸುಗಮಗೊಳಿಸಿದ್ದರು. ಅಲ್ಲಿನ ನಡೆದಿದ್ದ ಮಾತುಕತೆ ಪ್ರಕಾರ, ಪುತ್ತಿಲ ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಬೇಕಿತ್ತು.
ಆದರೆ, ಬಿಜೆಪಿ ಜಿಲ್ಲಾ ನಾಯಕರು ಹಾಗೂ ಪುತ್ತಿಲ ಪರಿವಾರದವರ ಲೆಕ್ಕಾಚಾರ, ನಿರೀಕ್ಷೆಗಳು ಈಗ ಉಲ್ಟಾ ಹೊಡೆದಿದೆ. ಏಕೆಂದರೆ, ಅರುಣ್ ಪುತ್ತಿಲ ಅವರು ಬಿಜೆಪಿಗೆ ವಾಪಾಸ್ಸಾಗುವುದಕ್ಕೆ ಪುತ್ತೂರಿನ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪುತ್ತಿಲ ಅವರು ಸ್ಥಳೀಯ ಮುಖಂಡರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಲ್ಲದೆ, ಪಕ್ಷಕ್ಕೆ ವಾಪಾಸ್ ಬರುವುದಾದರೆ ಅವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನ-ಮಾನ ನೀಡಬಾರದು ಹಾಗೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೆಂಗಳೂರಿಗೆ ಹೋಗಿ ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಿರುವುದು ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ಈ ದಿಢೀರ್ ಬೆಳವಣಿಗೆಗಳಿಂದಾಗಿ ಬಿಜೆಪಿಯ ಜಿಲ್ಲಾ ನಾಯಕರು ಕೂಡ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ, ಬೆಂಗಳೂರಿನಲ್ಲಿ ಪುತ್ತಿಗೆ ಮರು ಸೇರ್ಪಡೆಯಾಗುವುದಾಗಿ ಸುಳಿವು ಕೊಟ್ಟು, ಇದೀಗ ಆ ಬಗ್ಗೆ ಉಲ್ಟಾ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಪುತ್ತೂರಿನಲ್ಲಿ ಪುತ್ತಿಲ ಪಕ್ಷಕ್ಕೆ ಸೇರುವ ವಿಚಾರವಾಗಿ ಸ್ಥಳೀಯ ಮುಖಂಡರೊಂದಿಗೆ ಸಂಧಾನ ಮಾತುಕತೆ ನಡೆಸಿದ್ದು, ಅದು ವಿಫಲಗೊಂಡಿತ್ತು. ಆ ಬಳಿಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕೂಡ ಪುತ್ತಿಲ ಬಿಜೆಪಿಗೆ ವಾಪಾಸ್ ಬರುವುದು ಮಾಧ್ಯಮದ ಸೃಷ್ಟಿ ಎನ್ನುವ ಹೇಳಿಕೆ ಕೊಟ್ಟಿದ್ದರು.
ಈ ಎಲ್ಲ ಬೆಳವಣಿಗೆಗಳ ನಂತರ ಜಿಲ್ಲೆಯ ಆರ್ಎಸ್ಎಸ್ ನಾಯಕರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದು, ಇಂದು ಸ್ಥಳೀಯ ಬಿಜೆಪಿ ಮುಖಂಡರ ಜತೆ ಸಂಧಾನ ಸಭೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಒಮ್ಮತದ ನಿರ್ಧಾರ ಹೊರಬಂದ ಬಳಿಕವಷ್ಟೇ ಪುತ್ತಿಲ ಬಿಜೆಪಿಗೆ ಬರುವ ಹಾದಿ ಸುಗಮವಾಗಬಹುದು. ಸದ್ಯ ಲೋಕಸಭಾ ಚುನಾವಣೆ ಕೂಡ ಬಂದಿರುವ ಕಾರಣ ಪುತ್ತಿಲ ವರ್ಸಸ್ ಬಿಜೆಪಿ ನಡುವಿನ ಬಿಕ್ಕಟ್ಟು ಅತ್ಯಂತಗೊಳಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಾಯಕರು ಸಿಲುಕಿರುವುದು ಮಾತ್ರ ವಾಸ್ತವ. ಇಲ್ಲದಿದ್ದರೆ ಇದೇ ವೈಮನಸ್ಸು ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಹಿನ್ನಡೆಯುಂಟು ಮಾಡಿದರೂ ಅಚ್ಚರಿಯಿಲ್ಲ.