ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸೀರೆ, ಹಣ ವಶಕ್ಕೆ
– ಕಾಡಾನೆ ದಾಳಿ ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು
– ಮೂಡಿಗೆರೆ: ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ
NAMMUR EXPRESS NEWS
ಚಿಕ್ಕಮಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸೀರೆಗಳು, ದೋತಿ ಕೊಪ್ಪದ ಗಡಿಕಲ್ ಹಾಗೂ ತರೀಕೆರೆ ಎಂ.ಎನ್ ಕ್ಯಾಂಪ್ ಚೆಕ್ ಪೋಸ್ಟ್ 95 ಸಾವಿರ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚುನಾವಣೆ ಘೋಷಣೆಯಾಗಿದ್ದು ಜಿಲ್ಲಾಡಳಿತ ಎಲ್ಲೆಡೆ ವ್ಯಾಪಕ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಈಗಾಗಲೇ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಿದೆ. ಸೋಮವಾರ ಕೊಪ್ಪ ತಾಲೂಕಿನ ಗಡಿಕಲ್ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಂದು ಲಕ್ಷದ ಇಪ್ಪತೈದು ಸಾವಿರ ಬೆಲೆ ಬಾಳುವ ನೂರಾರು ಸೀರೆಗಳು ಹಾಗೂ ದೋತಿಗಳನ್ನು ಹಾಗೂ ಅದನ್ನು ತುಂಬಿದ್ದ ವಾಹನವನ್ನು ಎಸ್.ಎಸ್.ಟಿ ತಂಡ ವಶಕ್ಕೆ ಪಡೆದಿದೆ.
ಇನ್ನೊಂದೆಡೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಎನ್ ಕ್ಯಾಂಪ್ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತವಾಗಿ ಸ್ಕೂಟಿಯೊಂದರಲ್ಲಿ ಕೊಂಡೊಯ್ಯುತ್ತಿದ್ದ 95 ಸಾವಿರ ರೂ. ಹಣವನ್ನು ಸೀಜ್ ಮಾಡಲಾಗಿದೆ. ಈ ಹಣ ಹಾಗೂ ಸೀರೆಗಳು ಯಾವುದೇ ಚುನಾವಣೆ ಅಕ್ರಮಕ್ಕೆ ಸಂಬಂಧಿಸಿಲ್ಲ ಆದರೂ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ದಾಖಲೆ ಸರಿಯಾಗಿ ಇಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ.
– ಕಾಡಾನೆ ದಾಳಿ ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು
ಮೂಡಿಗೆರೆ: ಕಾಡಾನೆಯೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಯಲ್ಲಿ ಸೋಮವಾರ ಸಂಜೆ ನಡೆದಿದೆ. ಮೂಡಿಗೆರೆ ಪಟ್ಟಣದ ನಿವಾಸಿ ಲೋಕೇಶ್ ಮತ್ತು ಅವರ ಸಹೋದರಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಿಂದಿರುವಾಗ ದೇವರಮನೆ ರಸ್ತೆಯಲ್ಲಿ ಕಾಡಾನೆ ಬೈಕಿಗೆ ಅಡ್ಡ ಬಂದು ಅಟ್ಟಿಸಿಕೊಂಡು ಬಂದಿದೆ. ತಕ್ಷಣ ಬೈಕ್ ಸವಾರರು ಓಡಿ ಹೋಗಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬೈಕ್ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್ ಜಖಂಗೊಂಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾದ ಅಭಿಜಿತ್, ಪರಮೇಶ್, ಬಣಕಲ್ ಠಾಣಾ ಪಿ.ಎಸ್.ಐ ಎನ್.ಕೆ.ಓಮನಾ, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಮೂಡಿಗೆರೆ: ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ
ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನ 10ನೇ ತಿರುವಿನಲ್ಲಿ 16 ಚಕ್ರದ ಲಾರಿಯೊಂದು ತಿರುವು ತೆಗೆದುಕೊಳ್ಳಲಾಗದೆ ಸಿಕ್ಕಿಹಾಕಿಕೊಂಡ ಪರಿಣಾಮ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡು, ಸವಾರರು, ಪ್ರಯಾಣಿಕರು ಪರದಾಡಿದರು. ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ಸಿಮೆಂಟ್ ತುಂಬಿಕೊಂಡು ಸಾಗುತ್ತಿದ್ದ ಲಾರಿ ಚಾರ್ಮಾಡಿ ಘಾಟ್ ನ 10ನೇ ತಿರುವಿನಲ್ಲಿ ಸಿಲುಕಿಕೊಂಡಿತು. ಇದರಿಂದಾಗಿ ಸಕಾಲಕ್ಕೆ ನಿಗದಿತ ಸ್ಥಳ ತಲುಪಲಾಗದೆ ರೋಗಿಗಳು, ವಿದ್ಯಾರ್ಥಿಗಳು ಪ್ರಯಾಣಿಕರು ಪರದಾಡಿದರು. ಇನ್ನು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದರೂ, 16 ಚಕ್ರದ ಲಾರಿ ಈ ಮಾರ್ಗದಲ್ಲಿ ಸಂಚರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊಟ್ಟಿಗೆಹಾರದಲ್ಲಿ ಚುನಾವಣೆ ಹಿನ್ನಲೆಯಲ್ಲಿ ಚೆಕ್ ಪೋಸ್ಟ್ ಅಳವಡಿಸಿ ವಾಹನ ತಪಾಸಣೆ ನಡೆಸುತ್ತಿದ್ದರೂ ಈ ಲಾರಿ ಆ ಮಾರ್ಗದಲ್ಲೇ ಸಾಗಿರುವುದಕ್ಕೆ ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗಿದೆ.