ಕರಾವಳಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುತೇಕ ಫೈನಲ್!?
– ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ನ ಅಭ್ಯರ್ಥಿಗಳ ಅಧಿಕೃತ ಘೋಷಣೆಯಷ್ಟೇ ಬಾಕಿ
– ಎರಡೂ ಕಡೆ ಚುನಾವಣಾ ಕಣಕ್ಕಿಳಿಯಲು ಸಿದ್ಧರಾದ ಆಕಾಂಕ್ಷಿಗಳು
– ದಕ್ಷಿಣ ಕನ್ನಡದಲ್ಲಿ ಪದ್ಮರಾಜ್, ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಖಚಿತ
NAMMUR EXPRESS NEWS
ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಯಾವುದೇ ಕ್ಷಣ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಮಂಗಳವಾರ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ನ ಸಿಇಸಿ ಸಭೆಯಲ್ಲಿ ಕರ್ನಾಟಕದ ಸುಮಾರು 15ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಆ ಪೈಕಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಕೂಡ ಸೇರಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿಯಾಗಿರುವ, ಬಿಲ್ಲವ ಸಮಾಜದ ಮುಖಂಡ ಪದ್ಮರಾಜ್ ರಾಮಯ್ಯ ಅವರ ಹೆಸರು ಅಂತಿಮಗೊಂಡಿದ್ದು, ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
ವೃತ್ತಿಯಲ್ಲಿ ವಕೀಲರಾಗಿರುವ ಪದ್ಮರಾಜ್ ಅವರು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಧುರೀಣ ಜನಾರ್ದನ ಪೂಜಾರಿ ಅವರ ಅಪ್ಪಟ ಶಿಷ್ಯ ಕೂಡ ಆಗಿದ್ದಾರೆ. ಬಿಜೆಪಿಯಿಂದ ನಿವೃತ್ತ ಸೇನಾಧಿಕಾರಿಯಾಗಿರುವ ಬೃಜೇಶ್ ಚೌಟ ಅವರಿಗೆ ಟಿಕೆಟ್ ಲಭಿಸಿದ್ದು, ಈಗಾಗಲೇ ಬಿರುಸಿನ ಪ್ರಚಾರ ಕೂಡ ಪ್ರಾರಂಭಿಸಿದ್ದಾರೆ. ಪದ್ಮರಾಜ್ ಹೆಸರು ಘೋಷಣೆಯಾದರೆ, ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಬಿಲ್ಲವ ವರ್ಸಸ್ ಬಂಟ ಸಮುದಾಯದ ನಡುವಿನ ಫೈಟ್ ಆಗಲಿದೆ. ಇಬ್ಬರೂ ಹೊಸ ಮುಖವಾಗಿರುವ ಕಾರಣ ಮತದಾರರಿಗೂ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಈ ಬಾರಿ ಅವಕಾಶ ಲಭಿಸಿದೆ.
ಇನ್ನು ತಮಗೆ ಟಿಕೆಟ್ ಲಭಿಸುವ ಕುರಿತು ಪದ್ಮರಾಜ್ ಪ್ರತಿಕ್ರಿಯಿಸಿದ್ದು, ದೇಶದ ಭಾವನೆಗಳಿಗೆ ಬೆಲೆ ಕೊಡುವ ಪಕ್ಷ ಅದು ಕಾಂಗ್ರೆಸ್. ನನಗೆ ಈ ಬಾರಿ ಟಿಕೆಟ್ ಲಭಿಸುತ್ತದೆ ಎನ್ನುವ ಭರವಸೆ ಇದೆ. ನಾನು ಜನರ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಂಡಿದ್ದೇನೆ. ನಾನು ನಾರಾಯಣ ಗುರುಗಳ ತತ್ತ್ವ ಸಂದೇಶ ಹಾಗೂ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಜಿಲ್ಲೆಯ ಬಗ್ಗೆ ನನಗೆ ಬಹಳ ಕನಸು ಇದೆ. ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸವಾಗುತ್ತದೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಅದನ್ನು ಅತ್ಯುತ್ತಮವಾಗಿ ಎದುರಿಸುವುದಕ್ಕೆ ನಾವು ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ!
ಅತ್ತ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೊನ್ನೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹಿರಿಯ ನಾಯಕ ಜಯಪ್ರಕಾಶ್ ಅವರಿಗೆ ಟಿಕೆಟ್ ಫೈನಲ್ ಆಗಿರುವುದಾಗಿ ಹೇಳಲಾಗುತ್ತಿದೆ. ಈ ಹಿಂದೆ ಸಂಸದರಾಗಿ, ಶಾಸಕರಾಗಿ, ಸಚಿವರಾಗಿ ಜಯಪ್ರಕಾಶ್ ಅವರಿಗೆ ಸುಧೀರ್ಘ ರಾಜಕೀಯ ಅನುಭವವಿದೆ. ಅಷ್ಟೇಅಲ್ಲ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೇ ಈ ಹಿಂದೆಯೂ ಚುನಾವಣೆ ಎದುರಿಸಿರುವ ಕಾರಣ ಕ್ಷೇತ್ರದ ಮತದಾರರ ನಾಡಿಮಿಡಿತವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಯ ಪ್ರಕಾಶ್ ಅವರ ಹೆಸರು ಘೋಷಣೆಯಾದರೆ, ಈ ಕ್ಷೇತ್ರದಲ್ಲಿ ಈಗಾಗಲೇ ಟಿಕೆಟ್ ಪಡೆದು ಪ್ರಚಾರ ಆರಂಭಿಸಿರುವ ಮಾಜಿ ಸಚಿವ, ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ನಡುವೆ ಪ್ರಬಲ ಸ್ಪರ್ಧೆ ಏರ್ಪಡಲಿದೆ.
ಇಬ್ಬರು ಅಭ್ಯರ್ಥಿಗಳಿಗೂ ರಾಜಕೀಯವಾಗಿ ಉತ್ತಮ ವರ್ಚಸ್ಸು, ಅನುಭವ ಹಾಗೂ ಜಾತಿ ಬಲವಿದೆ. ಜಾತಿ ಲೆಕ್ಕಾಚಾರದಲ್ಲಿಯೂ ಕೋಟ ಬಿಲ್ಲವ ಸಮುದಾಯಕ್ಕೆ ಸೇರಿದ್ದರೆ ಜಯಪ್ರಕಾಶ್ ಹೆಗ್ಡೆ ಬಂಟ ಸಮುದಾಯಕ್ಕೆ ಸೇರಿದ್ದಾರೆ. ಹೀಗಿರುವಾಗ, ಈ ಕ್ಷೇತ್ರದಲ್ಲಿಯೂ ಬಂಟ ವರ್ಸಸ್ ಬಿಲ್ಲವರ ನಡುವಿನ ಹಣಾಹಣಿಗೆ ಸಾಕ್ಷಿಯಾಗಲಿದೆ. ತಮಗೆ ಟಿಕೆಟ್ ಲಭಿಸುವ ಕುರಿತಂತೆ ಜಯಪ್ರಕಾಶ್ ಹೆಗ್ಡೆ ಕೂಡ ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ನಾವು ಜಾತ್ಯತೀತ ಸಮಾಜದಲ್ಲಿ ಇದ್ದೇವೆ. ಇಲ್ಲಿ ಜನರ ಅಭಿಪ್ರಾಯ ಮುಖ್ಯ. ನಾನು ಯಾವುದೇ ಚುನಾವಣೆಯಲ್ಲಿ ಎದುರಾಳಿಯನ್ನು ಟೀಕಿಸುವುದಿಲ್ಲ. ನನ್ನ ಹೆಸರಿನಲ್ಲೇ ಮತ ಕೇಳುತ್ತೇನೆ ಹಾಗೂ ನನ್ನ ಬಗ್ಗೆ ಗೊತ್ತಿಲ್ಲದವರ ಬಳಿ ಪರಿಚಯ ಮಾಡಿಕೊಳ್ಳುತ್ತೇನೆ. ನನಗೆ ನನ್ನ ಕ್ಷೇತ್ರದ ಜನಪ್ರತಿನಿಧಿ ಮುಖ್ಯ ಅಂದುಕೊಂಡು ಮತದಾರರು ತಮ್ಮ ಮತ ಚಲಾಯಿಸಬೇಕು ಎಂದಿದ್ದಾರೆ.
ಒಟ್ಟಿನಲ್ಲಿ ಕರಾವಳಿಯ ಎರಡೂ ಕ್ಷೇತ್ರದಲ್ಲಿ ಇನ್ನು ಕೂಡ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡದಿದ್ದರೂ ಪ್ರಬಲ ಆಕಾಂಕ್ಷಿಗಳಾಗಿ ಪದ್ಮರಾಜ್ ಹಾಗೂ ಜಯಪ್ರಕಾಶ್ ಹೆಗ್ಡೆ ಚುನಾವಣಾ ಕಣಕ್ಕಿಳಿಯುವುದಕ್ಕೆ ಸಿದ್ಧರಾಗಿ ನಿಂತಿರುವುದು ಗಮನಾರ್ಹ.