ಬೋರ್ ವೆಲ್ ಕೊರೆಯುವ ಲಾರಿಗಳಿಗೆ ನೋಂದಣಿ ಕಡ್ಡಾಯ..!
– ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ
– 1 ವಾರದೊಳಗೆ ನೋಂದಾಯಿಸಿಕೊಳ್ಳದೆ ಇದ್ದಲ್ಲಿ ಕಾನೂನು ಕ್ರಮ
NAMMUR EXPRESS NEWS
ಚಿಕ್ಕಮಗಳೂರು: ಅಂತರ್ಜಲದ ಮಟ್ಟ ಕುಸಿತದ ಭೀತಿಯ ನಡುವಲ್ಲೇ ಕೊಳವೆ ಬಾವಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆದರೆ ಇನ್ಮುಂದೆ ಕೊಳವೆ ಬಾವಿಗಳನ್ನು ಕೊರೆಯುವ ಲಾರಿಗಳು ಇನ್ಮುಂದೆ ಕಡ್ಡಾಯವಾಗಿ ಅಂತರ್ಜಲ ಇಲಾಖೆಯಿಂದ 7 (ಎ) ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಆದೇಶಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಹಾಗೂ ಏಜೆಂಟರು ಹಾಗೂ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 7(ಎ) ರಂತೆ ನೋಂದಾಯಿಸಿಕೊಂಡಿರುವ ಲಾರಿ ಮಾಲೀಕರು ಕೊಳವೆಬಾವಿ ಯನ್ನು ಕೊರೆಯತಕ್ಕದ್ದು ನೊಂದಾಯಿಸಿಕೊಳ್ಳದೆ ಇರುವ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಒಂದು ವಾರದೊಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದಿದ್ದಾರೆ.
ಒಂದು ವಾರದೊಳಗೆ ನೋಂದಾಯಿಸಿಕೊಳ್ಳದೆ ಇರುವ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದಲ್ಲದೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದ ಅವರು ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸರ್ಕಾರದಿಂದ ಮಂಜೂರಾಗಿರುವ ಕೊಳವೆಬಾವಿಗಳನ್ನು ಅತಿ ಶೀಘ್ರವಾಗಿ ಕೊರೆದು ಪೂರ್ಣಗೊಳಿಸಬೇಕು ಎಂದಿದ್ದಾರೆ.