ಟಾಪ್ ನ್ಯೂಸ್ ಕರಾವಳಿ
ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ
– ಬಂಟ್ವಾಳ: ಮೊಬೈಲ್ ಗೀಳಿಗೆ ಬಲಿಯಾದ ಬಾಲಕ
– ಕಡಬ : ಅಕ್ರಮ ಸ್ಫೋಟಕ ಬಳಸಿ ಕಲ್ಲು ಸ್ಫೋಟದಿಂದ ಮನೆಗೆ ಹಾನಿ
– ಬಂಟ್ವಾಳ : ಬೆಂಕಿ ಅವಘಡಕ್ಕೆ ಬಡ ಮಹಿಳೆಯ ಮನೆ ಸುಟ್ಟು ಭಸ್ಮ
– ಪುತ್ತೂರು: ಶೋರೂಂ ಗೋಡೌನ್ ನಲ್ಲಿ ಬೆಂಕಿ ಅವಘಡ
– ಬಂಟ್ವಾಳ: ಅಮ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರ ಮೃತದೇಹ ಪತ್ತೆ
NAMMUR EXPRESS NEWS
ಸುಳ್ಯ: ಯುವಕನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಾಪತ್ತೆಯಾದ ಘಟನೆ ಸುಳ್ಯದ ಗಾಂಧಿನಗರ ಎಂಬಲ್ಲಿ ನಡೆದಿದೆ. ಈ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಉತ್ತರ ಕರ್ನಾಟಕ ಮೂಲದ ಕಾರ್ಮಿಕ ಕುಟುಂಬದ ಬಾಲಕಿಗೆ ಅದೇ ಭಾಗದ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಆಕೆಯ ಮನೆಗೆ ತೆರಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ಈ ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆ ಯುವಕ ನಾಪತ್ತೆಯಾಗಿದ್ದಾನೆ. ಇನ್ನು ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
– ಬಂಟ್ವಾಳ: ಮೊಬೈಲ್ ಗೀಳಿಗೆ ಬಲಿಯಾದ ಬಾಲಕ
ಬಂಟ್ವಾಳ: ಬಂಟ್ವಾಳ ಕಸ್ಟಾ ಗ್ರಾಮದ ಜಕ್ರಿಬೆಟ್ಟುನಲ್ಲಿ ಮನೆಯ ಮಹಡಿಯಿಂದ ಬಾಲಕ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಪುತ್ರ ಆದಿಶ್(15) ಮೃತ. ಈತ ಮನೆಮಂದಿಯ ಕಣ್ಡಪ್ಪಿಸಿ ಮೊಬೈಲ್ ತೆಗೆದುಕೊಂಡು ಮನೆಯಿಂದ ಹೊರಗೆ ಬಂದಿದ್ದು, ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಲೆಗೆ ಗಂಭೀರ ಗಾಯವಾಗಿ, ವಿಪರೀತ ರಕ್ತಸ್ರಾವವಾಗಿತ್ತು. ಬಾಲಕನ ತಂದೆ ಮನೆಯಿಂದ ಹೊರಗೆ ಬಂದಾಗ ಮಗ ಮೃತಪಟ್ಟಿರುವುದು ಗೊತ್ತಾಗಿದೆ. ಬಾಲಕನಿಗೆ ರಾತ್ರಿ ವೇಳೆ ಮೊಬೈಲ್ ಹಾಗೂ ಟಿವಿ ನೋಡುವ ಅಭ್ಯಾಸವಿತ್ತು. ಮೊಬೈಲ್ ಗೀಳಿನಿಂದ ಇಂತಹ ದುರ್ಘಟನೆ ನಡೆದಿದೆ.
– ಕಡಬ : ಅಕ್ರಮ ಸ್ಫೋಟಕ ಬಳಸಿ ಕಲ್ಲು ಸ್ಫೋಟದಿಂದ ಮನೆಗೆ ಹಾನಿ
ಕಡಬ : ಅಕ್ರಮ ಸ್ಫೋಟಕ ಬಳಸಿ ಕಲ್ಲು ಒಡೆಯುತ್ತಿರುವ ಪರಿಣಾಮ ಮನೆಯ ಶೀಟುಗಳಿಗೆ ಹಾನಿಯಾಗುತ್ತಿರುವ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಮನೆ ಮಾಲಿಕ ಸ್ಫೋಟ ನಡೆಸುವ ಜಮೀನು ಮಾಲೀಕನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ. ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಕುಕ್ಕಿಪ್ಪನ ಮನೆ ಎಂಬಲ್ಲಿನ ನಿವಾಸಿ ಆನಂದ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆ ಸಮೀಪದ ನಿವಾಸಿ ದಯಾನಂದ ಎಂಬವರು ಏನೇಕಲ್ಲು ಗ್ರಾಮದ ಅಜಿರುಪೂಲಿ ಎಂಬಲ್ಲಿ ಅವರ ಜಮೀನಿನಲ್ಲಿ ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆಡು ಸೈಜು ಕಲ್ಲಗಳನ್ನಾಗಿ ತಯಾರಿಸುತ್ತಿರುವುದಾಗಿದೆ.
ಇದರಿಂದ ಸ್ಫೋಟಗೊಂಡ ಕಲ್ಲುಗಳು ಆನಂದ ಗೌಡ ಅವರ ಮನೆಯ ಶೀಟುಗಳ ಮೇಲೆ ಸಿಡಿದು ಮನೆ ಶೀಟುಗಳು ಹಾನಿಗೊಂಡಿದೆ ಹಾಗೂ ಕಲ್ಲು ಹುಡಿಯಿಂದಾಗಿ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ ಎಂದು ನೀಡಿದ ದೂರಿನಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಂಕ 23/2024, 0 427 ಹಾಗೂ ಕಲಂ 5, 9ಬಿ(1)(ಬಿ) ಸ್ಪೋಟಕ ಕಾಯ್ದೆ ಅಧಿನಿಯಮ 1884 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
– ಬಂಟ್ವಾಳ : ಬೆಂಕಿ ಅವಘಡಕ್ಕೆ ಬಡ ಮಹಿಳೆಯ ಮನೆ ಸುಟ್ಟು ಭಸ್ಮ
ಬಂಟ್ವಾಳ : ಬಡ ಕುಟುಂಬದ ಮಹಿಳೆಯೋರ್ವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಎಲಿಯನಡುಗೋಡು ಗ್ರಾಮದ ಉಪ್ಪಿರ ಎಂಬಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ಮೋನಮ್ಮ ಅವರ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಇವರು ತನ್ನ ಇಬ್ಬರು ಮಕ್ಕಳೊಂದಿಗೆ ಸ್ಥಳೀಯ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿದ್ದ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿ ಉಂಟಾದ ಬೆಂಕಿಯಿಂದ ಭಾರೀ ಹೊಗೆ ಸ್ಥಳೀಯರು ಗಮನಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಆದರೆ ಅಷ್ಟರಲ್ಲಾಗಲೇ ತಗಡು ಶೀಟಿನ ಮನೆ ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ. ಅವಘಡದಿಂದ ಮೋನಮ್ಮ ಅವರ ಪದವಿ ವ್ಯಾಸಂಗ ಮಾಡುತ್ತಿರುವ ಪುತ್ರಿಯ ವಾರ್ಷಿಕ ಪರೀಕ್ಷೆಯ ಹಾಲ್ ಟಿಕೆಟ್ ಕೂಡಾ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸದಸ್ಯೆ ಶೋಭಾ, ಪಿಡಿಒ ಪದ್ಮನಾಭ ನಾಯ್ಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಪುತ್ತೂರು: ಬೆಳ್ಳಂ ಬೆಳಿಗ್ಗೆ ಶೋರೂಂ ಗೋಡೌನ್ ನಲ್ಲಿ ಬೆಂಕಿ ಅವಘಡ:
ಪುತ್ತೂರು: ನಗರದ ದರ್ಬೆಯಲ್ಲಿರುವ ಪ್ರತಿಷ್ಠಿತ ಶೋರೂಂನ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.
– ಬಂಟ್ವಾಳ: ಅಮ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರ ಮೃತದೇಹ ಪತ್ತೆ
ಬಂಟ್ವಾಳ : ಕಳೆದ ಬುಧವಾರ ಕೆಲಸ ಮಾಡುತ್ತಿದ್ದ ಕಚೇರಿಯಿಂದಲೇ ನಾಪತ್ತೆಯಾಗಿದ್ದ ಅಮ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಪೂಂಜಾಲಕಟ್ಟೆ ಸಮೀಪದ ಕೊಲ್ಪದಬೈಲು ನಿವಾಸಿ ಲಕ್ಷ್ಮಿನಾರಾಯಣ ಕೆ (52) ಅವರ ಮೃತದೇಹ ಸಂಜೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿನ ನದಿಯಲ್ಲಿ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಇವರ ಬೈಕ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿತ್ತು. ಬಳಿಕ ಇಲಾಖಾಧಿಕಾರಿಗಳು ಹಾಗೂ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಮಾರ್ಚ್ 30 ರಂದು ಪೊಲೀಸರು ಪಟ್ರಮೆ ಆಸುಪಾಸಿನಲ್ಲಿ ಅವರ ಮೊಬೈಲ್ ಸಿಗ್ನಲ್ ಪತ್ತೆಹಚ್ಚಿದರು. ಇದರಿಂದ ಅನುಮಾನಗೊಂಡು ಅದೇ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಮೇಲಕ್ಕೆತ್ತಲಾಗಿದೆ. ಬುಧವಾರ ಬೆಳಿಗ್ಗೆ ಮನೆಯಿಂದ ಕಚೇರಿಗೆಂದು ಪತ್ನಿ ಬಳಿ ಹೇಳಿ ತೆರಳಿದ್ದ ಇವರು ಸಂಜೆಯಾದರೂ ಮನೆಗೆ ವಾಪಾಸು ಬಂದಿಲ್ಲ.
ಈ ಬಗ್ಗೆ ಮನೆ ಮಂದಿ ಕಚೇರಿಯಲ್ಲಿ ವಿಚಾರಿಸಿದಾಗ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಿ ಮನೆಗೆ ಹೋಗುತ್ತೇನೆಂದು ತೆರಳಿದ್ದಾರೆ ಎಂದು ಹೇಳಿದ್ದರು. ಆದರೆ ಲಕ್ಷ್ಮೀನಾರಾಯಣ ಅವರು ಮನೆಗೆ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಮಡಂತ್ಯಾರು ಸಮೀಪದ ಮಾಲಾಡಿ- ವಿದ್ಯಾನಗರ ನಿವಾಸಿ ಕೆ ರಮೇಶ್ ಅವರು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು . ಲಕ್ಷ್ಮಿನಾರಾಯಣ ಅವರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯದ ತಂಡದಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ಇವರ ನಾಪತ್ತೆ ಬಗ್ಗೆ ತಾಲೂಕು ತಹಶೀಲ್ದಾರ್ ಅವರ ನೇತೃತ್ವದ ನೌಕರರು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೂ ದೂರು ನೀಡಿದ್ದರು. ಈ ಹಿಂದೆಯೂ ಇವರು ಇದೇ ರೀತಿ ನಾಪತ್ತೆಯಾಗಿದ್ದರು ಬಳಿಕ ಪತ್ತೆಯಾಗಿದ್ದರು ಎನ್ನಲಾಗಿತ್ತು.