ಬೆಂಕಿ ಬಿದ್ದು ರಸ್ತೆ ಮಧ್ಯೆ ಉರಿದ ಡಸ್ಟರ್ ಕಾರು..!
– ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ
– ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ!
NAMMUR EXPRESS NEWS
ಡಸ್ಟರ್ ಕಾರೊಂದು ಆಕಸ್ಮಿಕವಾಗಿ ಉಂಟಾದ ಬೆಂಕಿಯಿಂದ ಹತ್ತಿ ಉರಿದ ಘಟನೆ ಬಂಟ್ವಾಳ – ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ. ಏಳಿಂಜೆಯ ಕೊಲ್ಲೆಟ್ಟು ನಿವಾಸಿ ಶರತ್ ಶೆಟ್ಟಿ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಮಗು ಸೇರಿದಂತೆ ನಾಲ್ಕು ಮಂದಿ ಇದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ತಕ್ಷಣ ಇಳಿದಿದ್ದು, ಯಾರಿಗೂ ಗಾಯಗಳಾಗಿಲ್ಲ .
ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಘಟನೆಯಿಂದ ಸುಮಾರು ಒಂದು ತಾಸುಗಳ ಕಾಲ ಬಂಟ್ವಾಳ – ಮೂಡುಬಿದಿರೆ ರಸ್ತೆ ತಡೆ ಉಂಟಾಗಿತ್ತು ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ವೇಳೆ ಕಾರು ಬ್ರೇಕ್ ಹಾಕಿದರೂ ನಿಲ್ಲದೇ ಇದ್ದು, ಬಳಿಕ ಚಾಲಕನ ಸಮಯ ಪ್ರಜ್ಞೆಯಿಂದ ಕಾರನ್ನು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ!
ಪತ್ನಿಯನ್ನು ಹತ್ಯೆಗೈದ ಆರೋಪಿ ಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೂಲತಃ ಹಾಸನ ಅರಕಲಗೂಡಿನ, ಕಾವೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗಣೇಶ್ ಕುಮಾರ್ (46) ಶಿಕ್ಷೆಗೊಳಗಾದ ಆರೋಪಿ. ನಾಲ್ಕು ವರ್ಷದ ಹಿಂದೆ ಈತ ಪತ್ನಿಯನ್ನು ಉಪಾಯದಿಂದ ಹೊರಕೆ ಕರೆದೊಯ್ದು ಕೊಲೆ ಮಾಡಿದ್ದ.
ಘಟನೆಯ ವಿವರ: ಕಾವೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತ ತನ್ನ ಪತ್ನಿಗೆ ದಿನನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂಬ ಆರೋಪವಿತ್ತು. 2020ರ ಜು.1ರಂದು ಸಂಜೆ ವೇಳೆ ಮನೆಗೆ ಸಾಮಾಗ್ರಿ ತರಲೆಂದು ಹೇಳಿ ಪತ್ನಿಯನ್ನು ಆರೋಪಿ ಗಣೇಶ್ ತನ್ನ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ. ರಾತ್ರಿ 7ರಿಂದ 7:20ರ ಮಧ್ಯೆ ಅಂತೋನಿಕಟ್ಟೆ ಎಂಬಲ್ಲಿರುವ ಕಪ್ಪು ಕಲ್ಲಿನ ಕೋರೆಯ ಮೇಲಿನಿಂದ ಪತ್ನಿಯ ಕುತ್ತಿಗೆ ಹಿಸುಕಿ ದೂಡಿ ಹಾಕಿ ಹತ್ಯೆ ಮಾಡಿದ್ದ. ಮಾತ್ರವಲ್ಲದೇ ಪತ್ನಿಯ ತಾಯಿಗೆ ಜೀವಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿತ್ತು.
ಪ್ರಕರಣದ ಬಗ್ಗೆ ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವ ಎಸ್. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ವಿಚಾರಣೆ ನಡೆಸಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿದ್ದರಿಂದ ಸೋಮವಾರ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 1 ಲ.ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 498 (ಎ)ರ ಅಪರಾಧಕ್ಕೆ 3 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 506ರ ಅಪರಾಧಕ್ಕೆ 2 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.