ಕಂಬಳಕ್ಕೆ ಈಗ ವೈದ್ಯರು ಎಂಟ್ರಿ!
– ಕಂಬುಲ ಕೆರೆಗೆ ’ಕೋಣ’ ಇಳಿಸಲಿರುವ ಭಾರತೀಯ ವೈದ್ಯಕೀಯ(ಐಎಂಎ )ಸಂಘ
– ಜೋಡುಕರೆ ಕಂಬಳದಲ್ಲಿ ಕರೆಗೆ ಇಳಿಯಲಿರುವ ವೈದ್ಯಕೀಯ ಸಂಘದ ಕೋಣಗಳು
ಕಂಬಳ ಎಂದರೆ… ತುಳುನಾಡಿನ ಜಾನಪದ ಕ್ರೀಡೆ ಕಂಬಳ. ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ.. ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು ಹೊಲದೊಡೆಯನ ಹಂಬಲವಾಗಿ, ಕೆಸರು ಮಣ್ಣಿನಲ್ಲಿ ಬೆವರು ಹರಿಸಿದ ಕೃಷಿಕರ ಬೆಂಬಲವಾಗಿ, ಧಾರ್ಮಿಕ, ಮನೋರಂಜನಾ ನೆಲೆಯಲ್ಲಿ ಹುಟ್ಟಿ ಬೆಳೆದ ಗದ್ದೆ ಕಂಬಳಕ್ಕೂ ಕೃಷಿಗೂ ಅವಿಭಾಜ್ಯ ನಂಟಿದೆ. ಆದರೆ ಇಂತಹ ಕಂಬಳಕ್ಕೂ – ಡಾಕ್ಟರ್ ಗಳಿಗೂ ಈಗ ಹೊಸದೊಂದು ಬಂಧ ಬೆಸೆದುಕೊಂಡಿದೆ.
ಹೌದು. ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಭಾರತೀಯ ವೈದ್ಯಕೀಯ(ಐಎಂಎ )ಸಂಘದ ಪ್ರವೇಶ ಪಡೆದಿದೆ. ಭಾರತೀಯ ವೈದ್ಯಕೀಯ ಸಂಘ (ರಿ ) ಮಂಗಳೂರು ಪ್ರಪ್ರಥಮ ಬಾರಿಗೆ ವೈದ್ಯಕೀಯ ಸೇವೆಯ ಜೊತೆಗೆ ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಪಾಲ್ಗೊಳ್ಳಲಿದೆ. ಡಾಕ್ಟರ್ ಅವಿನ್ ಆಳ್ವರವರ ನೇತೃತ್ವದಲ್ಲಿ ವೈದ್ಯಕೀಯ ಸಂಘವು ಸ್ವತಃ ಕಂಬಳದ ಕೋಣ ಗಳನ್ನು ಕಂಬಳದ ಕರೆಗೆ ಇಳಿಸಲಿದೆ.
ಎಲ್ಲಿ ನಡೆಯುತ್ತೆ ಕಂಬಳ?!
ಭಾರತೀಯ ವೈದ್ಯಕೀಯ(ಐಎಂಎ )ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ. ರಂಜನ್ ಆರ್ ಕೆ ಈ ಬಗ್ಗೆ ಮಾಹಿತಿ ನೀಡಿದ್ದು “ಎಪ್ರಿಲ್ 12 ಶುಕ್ರವಾರ ಸಂಜೆ 5 ಗಂಟೆಗೆ ಆರಂಭಗೊಳ್ಳುವ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ.)ಇದರ ಆಯೋಜನೆಯಲ್ಲಿ ಗುರುಪುರದಲ್ಲಿ ನಡೆಯುವ “ಮೂಳೂರು- ಅಡ್ಡೂರು” ಹೊನಲು ಬೆಳಕಿನ ಜೋಡುಕರೆ ಕಂಬಳ ಉತ್ಸವದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೇವೆ . ಈ ನಿಟ್ಟಿನಲ್ಲಿ ಕಂಬಳ ಸಮಿತಿಯವರ ಜೊತೆಗೆ ಈಗಾಗಲೇ ಮಾತುಕತೆಯನ್ನು ನಡೆಸಿದ್ದು, ಸಮಿತಿಯವರು ನಮಗೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ” ಎಂದು ಡಾ.ರಂಜನ್ ತಿಳಿಸಿದ್ದಾರೆ.