ರಾಜ್ಯದೆಲ್ಲೆಡೆ ಏ.18, 19 ರಂದು ಯೆಲ್ಲೊ ಅಲರ್ಟ್
– ಧಾರಾಕಾರ ಮಳೆಯಾಗುವ ಸಾಧ್ಯತೆ
– ಹವಾಮಾನ ಇಲಾಖೆ ಮುನ್ಸೂಚನೆ: ಎಲ್ಲೆಲ್ಲಿ ಮಳೆ?
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಏ.18-19ರಂದು ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಈ ಎರಡು ದಿನ ಎಲ್ಲ 31 ಜಿಲ್ಲೆಗಳಿಗೂ ಐಎಂಡಿ ‘ಯೆಲ್ಲೊ ಅಲರ್ಟ್’ ಸೂಚನೆ ನೀಡಿದೆ. ಪ್ರತಿ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದೂ ಮುನ್ನೆಚ್ಚರಿಕೆ ನೀಡಲಾಗಿದೆ. ಕಳೆದ ವಾರದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಮಳೆ ಸುರಿದು ತಂಪೆರೆದಿತ್ತು. ಅದಾದ ಮೇಲೆ ಬಿಸಿಲಿನ ವಾತಾವರಣ ಕಾಣಿಸಿತ್ತು. ಈ ವಾರದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯುವ ಸಾಧ್ಯತೆಯಿದೆ ಎಂದೂ ತಿಳಿಸಿದೆ.
ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಕೆಲವು ಭಾಗದಲ್ಲಿ ಮಂಗಳವಾರ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಹಾಗೂ ಮಲೆನಾಡು ಭಾಗದ ಕೆಲವು ಪ್ರದೇಶಗಳಲ್ಲಿ ಬುಧವಾರ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಮುಂದಿನ ಎರಡು ದಿನಗಳು ಬೆಂಗಳೂರಿನಲ್ಲಿ ನಿರ್ಮಲ ಆಕಾಶ ಇರಲಿದ್ದು ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜ್ಯದಲ್ಲೇ ಅತಿ ಗರಿಷ್ಠ ಉಷ್ಣಾಂಶ 39.2 ಡಿಗ್ರಿ ಸೆಲ್ಸಿಯಸ್ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ದಾಖಲಾಗಿತ್ತು.