ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ
– ಮೇ 3ರಿಂದ 12ರವರೆಗೆ ಕಾಜೂರು ಊರೂಸ್ ಸಂಭ್ರಮ
– 800 ವರ್ಷ ಇತಿಹಾಸವುಳ್ಳ ದರ್ಗಾದಲ್ಲಿ ಧಾರ್ಮಿಕ ಸಮಾಗಮ
NAMMUR EXPRESS NEWS
ಬೆಳ್ತಂಗಡಿ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್ ಇಲ್ಲಿ ಮೇ 3ರಿಂದ 12ರವರೆಗೆ ಕಾಜೂರು ಊರೂಸ್ ನಡೆಯಲಿದೆ. ಒಂದು ಕಡೆ ಪಶ್ಚಿಮ ಘಟ್ಟಗಳ ದಟ್ಟವಾದ ಹಸಿರು ಕಾನನ ಮತ್ತೊಂದೆಡೆ ನೇತ್ರಾವತಿ ನದಿ ಹರಿದುಹೋಗುವ ಮನಮೋಹಕ ದೃಶ್ಯ ಎಂಥವರಿಗೂ ಮುದ ನೀಡುತ್ತದೆ. ನಿಸರ್ಗದ ತಪ್ಪಲಿನಲ್ಲಿರುವ ಕಾಜೂರು ದರ್ಗಾ ಶರೀಫ್ನಲ್ಲಿ ಉರೂಸ್ ಸಂಭ್ರಮದಲ್ಲಿದ್ದು ಈ ಕಾರ್ಯಕ್ರಮ ಮೇ 3ರಿಂದ 12ರವರೆಗೆ ನಡೆಯಲಿದೆ. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸಮಸ್ಯೆ ಬಗೆಹರಿಸುವ ಧಾರ್ಮಿಕ ಕೇಂದ್ರ!
ಬೆಳ್ತಂಗಡಿಯಿಂದ ಕಿಲ್ಲೂರು ಮಾರ್ಗವಾಗಿ 19 ಕೀ.ಮೀ ಸಂಚರಿಸಿದರೆ ಇತಿಹಾಸ ಪ್ರಸಿದ್ದ ಕಾಜೂರು ದರ್ಗಾ ಸಿಗಲಿದೆ. ಈ ದರ್ಗಾವನ್ನು ಒಂದು ಶತಮಾನಕ್ಕೂ ಹಿಂದೆ ಮುಸ್ಲಿಂ ದೇವಮಾನವ ವಲಿಯುಲ್ಲಾಹಾ ಅವರ ನೆನಪಿಗಾಗಿ ನಿರ್ಮಿಸಲಾಗಿದೆ ಎಂಬುವುದು ಜನಜನಿತವಾದ ಮಾತು. ಇಲ್ಲಿಂದ ಕೊಂಚ ದೂರದಲ್ಲಿ ಕಿಲ್ಲೂರು ದರ್ಗಾವಿದ್ದೂ ಈ ಎರಡು ದರ್ಗಾಗಳನ್ನು ಅವರ ನೆನಪಿಗಾಗಿ ನಿರ್ಮಿಸಲಾಗಿದೆಯಂತೆ. ಎಲ್ಲಾ ಧರ್ಮದ ಜನರು ಹಾಗೂ ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಶೃದ್ದಾಳುಗಳು ಈ ಸ್ಥಳಕ್ಕೆ ಭೇಟಿ ನೀಡಿ ಹರಕೆ ತೀರಿಸುತ್ತಾರೆ. ಕಾಜೂರ್ ದರ್ಗಾವು ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗಿರುವುದರಿಂದ ದರ್ಗಾಕ್ಕೆ ಎಣ್ಣೆ ಒಪ್ಪಿಸಿದರೆ ತಮ್ಮ ಪ್ರಾರ್ಥನೆಗಳು ನೆರವೇರುತ್ತವೆ ಎಂಬುವುದು ಶೃದ್ದಾಳುಗಳ ನಂಬಿಕೆಯಾಗಿದೆ.
ಮಹಿಳೆಯರಿಗೂ ಪ್ರವೇಶ ಇದೆ!
ಮಹಿಳೆಯರಿಗೆ ಕೂಡ ದರ್ಗಾಕ್ಕೆ ಪ್ರವೇಶಿಸಲು ಅವಕಾಶವಿದ್ದು ಅವರಿಗೆ ಪ್ರವೇಶ ಪಡೆಯಲು, ಪ್ರಾರ್ಥನೆ ಸಲ್ಲಿಸಲು ಮತ್ತು ಆಶೀರ್ವಾದ ಪಡೆಯಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಮೇ 3ರಂದು ಉರೂಸ್ ಸಮಾರಂಭದ ಉದ್ಘಾಟನೆ
ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಆಶ್ರಯದಲ್ಲಿ ರಚನೆಯಾಗಿರುವ ಉರೂಸ್ ಸಮಿತಿಯ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ಜರುಗಲಿವೆ.. ಮೇ 3ರಂದು ಉರೂಸ್ ಸಮಾರಂಭದ ಉದ್ಘಾಟನೆಯನ್ನು ತಾ. ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸೈಯದ್ ಸಾದಾತ್ ತಂಙಳ್ ನೆರವೇರಿಸಲಿದ್ದು, ಧ್ವಜಾರೋಹಣವನ್ನು ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು ಇಬ್ರಾಹೀಂ ಕಾಜೂರು ನಡೆಸಲಿದ್ದಾರೆ.ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಬೆಲ್ಲದಗಂಜಿ ವಿತರಣೆ, ಉರೂಸ್ ಕೊನೆಯ ದಿನ ಸಾರ್ವಜನಿಕ ಮಹಾ ಅನ್ನದಾನ ನಡೆಯಲಿದೆ