ಶುರುವಾಯ್ತು ಮಳೆ ಅವಘಡ
– ಮಲಗಿದ್ದಾಗ ಚಾವಣಿ ಕುಸಿದು ಮಹಿಳೆ ಸಾವು
– ಗದಗದಲ್ಲಿ ವರುಣಾರ್ಭಟಕ್ಕೆ ಜಾನುವಾರು ಬಲಿ
– ಹಾಸನದಲ್ಲಿ ಮೂರು ಮನೆಗಳಿಗೆ ಹಾನಿ
– ಧಾರವಾಡದಲ್ಲಿ ಮುರಿದು ಬಿದ್ದ ಸಿಗ್ನಲ್ ಕಂಬ
NAMMUR EXPRESS NEWS
ವಿಜಯನಗರ: ಧಾರಕಾರವಾಗಿ ಸುರಿಯುತ್ತಿರುವ ಮಳೆ ನಾನಾ ಅವಾಂತರವನ್ನು ಸೃಷ್ಟಿ ಮಾಡಿದ್ದು, ಜನರ ಸಾವು-ನೋವಿಗೆ ಕಾರಣವಾಗಿದೆ. ಭಾರಿ ಮಳೆಗಾಳಿಗೆ ಚಾವಣಿ ಕುಸಿದು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಘಟನೆ ನಡೆದಿದೆ. ನಾಗಮ್ಮ (48) ಮೃತ ದುರ್ದೈವಿ. ರಾತ್ರಿ ಪೂರ್ತಿ ಸುರಿದ ಭಾರಿ ಮಳೆಯೊಂದಿಗೆ, ರಭಸವಾಗಿ ಬೀಸಿದ ಗಾಳಿಗೆ ಮನೆ ಚಾವಣಿ ಕುಸಿದಿದೆ. ಈ ವೇಳೆ ನಾಗಮ್ಮ ಗಂಭೀರ ಗಾಯಗೊಂಡಿದ್ದರು. ಕೂಡಲೇ ಕುಟುಂಬಸ್ಥರು ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಾಗಮ್ಮ ಮೃತಪಟ್ಟಿದ್ದಾರೆ. ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಗದಗದಲ್ಲಿ ವರುಣಾರ್ಭಟಕ್ಕೆ ಜಾನುವಾರು ಬಲಿ
ಗದಗ : ಜಿಲ್ಲೆ ಮುಂಡರಗಿ ತಾಲೂಕಿನ ಕೆಲೂರು ಗ್ರಾಮದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ಎತ್ತು ಹಾಗೂ ಎಮ್ಮೆ ಮೃತಪಟ್ಟಿವೆ. ರೈತ ಶಂಕ್ರಪ್ಪ ಸೋಂಪುರ ಅವರಿಗೆ ಸೇರಿದ ಎತ್ತು ಅನ್ನು ಮನೆ ಬಳಿ ಕಟ್ಟಿದ್ದರು. ಈ ವೇಳೆ ಸಿಡಿಲು ಬಡಿದು ಎತ್ತು ಜೀವ ಬಿಟ್ಟಿತ್ತು. ಮತ್ತೊಬ್ಬ ರೈತ ಹನುಮಪ್ಪ ಕೊಂಚಿಗೇರಿ ಎಂಬುವವರ ಎಮ್ಮೆಯೂ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಮೃತಪಟ್ಟಿದೆ. ಹೆತ್ತ ಮಕ್ಕಳಂತೆ ಜಾನುವಾರುಗಳನ್ನು ಜೋಪಾನ ಮಾಡಿದ್ದ ರೈತ ಕುಟುಂಬಗಳು ಕಣ್ಣೀರು ಹಾಕಿದರು. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು.
– ಹಾಸನದಲ್ಲಿ ಮೂರು ಮನೆಗಳಿಗೆ ಹಾನಿ
ಹಾಸನ : ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ವರ್ಷಧಾರೆಗೆ ಮೂರು ಮನೆಗಳಿಗೆ ಹಾನಿಯಾಗಿದೆ. ಸಕಲೇಶಪುರ ತಾಲೂಕಿನ ಬಿರಡಹಳ್ಳಿ ಗ್ರಾಮದಲ್ಲಿ ಭಾರಿ ಗಾಳಿಗೆ ವಾಸದ ಮನೆಯ ಹಂಚುಗಳು ಹಾರಿ ಹೋಗಿದ್ದವು. ಶೀಟ್ಗಳು ಮನೆಯ ಒಳಗೆ ಮುರಿದು ಬಿದ್ದಿತ್ತು. ಮನೆಯ ಮೇಲೆ ಮರ ಬಿದ್ದು ಒಂದು ಮನೆ ಜಖಂಗೊಂಡಿತ್ತು. ಗ್ರಾಮದ ಸಲೀಂ, ಚಂದ್ರು ಎಂಬುವವರಿಗೆ ಸೇರಿದ ಮನೆಗಳು ಹಾನಿಯಾಗಿದ್ದರೆ, ಜಾಕೋಬ್ ಪಿಂಟೊ ಎಂಬುವವರ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿತ್ತು. ಮನೆಯಲ್ಲಿದ್ದರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸುವಂತೆ ಒತ್ತಾಯಿಸಿದರು. ಮಳೆಯಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.
– ಧಾರವಾಡದಲ್ಲಿ ಮುರಿದು ಬಿದ್ದ ಸಿಗ್ನಲ್ ಕಂಬ
ಧಾರವಾಡ: ಜೋರಾಗಿ ಬೀಸಿದ ಗಾಳಿಗೆ ಸಿಗ್ನಲ್ ಕಂಬ ಮುರಿದು ಬಿದ್ದಿತ್ತು. ಧಾರವಾಡದ ಯುಬಿ ಹಿಲ್ ಸರ್ಕಲ್ನಲ್ಲಿದ್ದ ಕಂಬದ ಕೆಳಭಾಗದಲ್ಲಿ ತುಕ್ಕು ಹಿಡಿದಿತ್ತು. ರಭಸವಾಗಿ ಬೀಸಿದ ಗಾಳಿಗೆ ರಸ್ತೆ ಮೇಲೆಯೇ ಕಂಬ ಬಿದ್ದಿತ್ತು. ಅದೃಷ್ಟವಶಾತ್ ವಾಹನ ಸವಾರರು ಪಾರಾಗಿದ್ದರು. ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.