ಟಾಪ್ 3 ನ್ಯೂಸ್ ಕರ್ನಾಟಕ
ನೇಹಾ ಸಾವಿಗೆ ನ್ಯಾಯ ಕೊಡಿಸಲು ಬದ್ಧ
– ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಂಡಿದೆ
– ಲೋಕಸಭಾ ಚುನಾವಣೆ: 2 ದಿನ ಮದ್ಯ ಸಿಗಲ್ಲ
– ಏಪ್ರಿಲ್ ತಿಂಗಳ ರೇಷನ್ ಜೊತೆಗೆ ಖಾತೆಗೆ ಹಣ ಜಮಾ
ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣ..!
– ದೊರಕಿಸಿಕೊಡುವುದು ನಮ್ಮ ಕರ್ತವ್ಯ
– ಸಿಎಂ ಸಿದ್ದರಾಮಯ್ಯ ಹೇಳಿಕೆ
NAMMUR EXPRESS NEWS
ಬೆಂಗಳೂರು: ಶುಕ್ರವಾರ ಹುಬ್ಬಳ್ಳಿ ಕಾಲೇಜಿನಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನೇ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದನ್ನು ಲವ್ ಜಿಹಾದ್ ಎಂದೇ ಬಿಂಬಿಸುತ್ತಿದ್ದಾರೆ. ಈ ಸಂಬಂಧ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಬಗ್ಗೆ ಮಾತನಾಡಿದ್ದಾರೆ. ಈ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಯಾವುದೇ ಮರ್ಡರ್ ವೈಯಕ್ತಿಕ ಕಾರಣಕ್ಕೆ ಆಗಿರತ್ತೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಚೆನ್ನಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರ ಕೆಲಸ ಅದನ್ನ ಮಾಡ್ತಿದ್ದೇವೆ. ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರ ಹತ್ಯೆ ಖಂಡನೀಯ.
ಮೃತ ಯುವತಿಯ ಕುಟುಂಬಕ್ಕೆ ನನ್ನ ಸಂತಾಪಗಳು. ಘಟನೆ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಕಟ್ಟುನಿಟ್ಟಿನ ತನಿಖೆ ನಡೆಸಿ, ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ. ಘಟನೆ ಸಂಬಂಧ ಯಾರೊಬ್ಬರೂ ಉದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆತ್ತಿಕೊಳ್ಳುವುದಾಗಲೀ ಅಥವಾ ಸಮಾಜದ ಶಾಂತಿ ಕದಡುವ ಪ್ರಯತ್ನಕ್ಕೆ ಮುಂದಾಗಬಾರದು. ಯುವತಿಯ ಸಾವಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶಕ್ತಿಮೀರಿ ಶ್ರಮಿಸಲಿದೆ ಎಂದಿದ್ದಾರೆ.
ಲೋಕಸಭಾ ಚುನಾವಣೆ: 2 ದಿನ ಮದ್ಯ ಸಿಗಲ್ಲ
ಬೆಂಗಳೂರು: ಮೊದಲ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿಯಾಗುತ್ತಿದೆ. ಏಪ್ರಿಲ್ 24ರ ಸಂಜೆ 6 ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ನಗರದಲ್ಲಿ ಸೆಕ್ಷನ್ 144 ಜಾರಿಗೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಅಲ್ಲದೇ ಚುನಾವಣಾ ದಿನ ಮದ್ಯ ಮಾರಾಟವನ್ನು ಕೂಡ ನಿಷೇಧಿಸಲಾಗಿದೆ. ಮುಕ್ತ, ನಿರ್ಭಿತ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ನಿಷೇಧಾಜ್ಞೆ ವೇಳೆ ಸಾರ್ವಜನಿಕ ಸಭೆಗಳು, ಪ್ರಚಾರ ರ್ಯಾಲಿಗಳು ಐದಕ್ಕಿಂತ ಹೆಚ್ಚು ಜನ ಸೇರುವುದು, ಪ್ರತಿಕೃತಿ ದಹನ, ಮಾರಕಾಸ್ತ್ರಗಳನ್ನು ಹೊಂದುವುದು, ಪ್ರಚೋದನಾತ್ಮಕ ಭಾಷಣ ಹಾಗೂ ಬಹಿರಂಗ ರಾಜಕೀಯ ಘೋಷಣೆಗಳನ್ನು ಏಪ್ರಿಲ್ 24 ರಿಂದ ಏಪ್ರಿಲ್ 26ರವರೆಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಈ ಬಗ್ಗೆ ತಿಳಿಸಿದ್ದಾರೆ. ಸೆಕ್ಷನ್ 144 ಜಾರಿಯಾದ ಸಮಯದಲ್ಲಿ ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯೊಳಗೆ ಪ್ರಚಾರ ಮಾಡಲು ಅಥವಾ ಬ್ಯಾನರ್, ಫಲಕಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಅನುಮೋದಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರತುಪಡಿಸಿ ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಸೆಲ್ಪೋನ್, ಕಾರ್ಡ್ಲೆಸ್ ಫೋನ್ ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಏಪ್ರಿಲ್ ತಿಂಗಳ ರೇಷನ್ ಜೊತೆಗೆ ಖಾತೆಗೆ ಹಣ ಜಮಾ
ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿದಾರರಿಗೆ ಏಪ್ರಿಲ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಕಾರ್ಡ್ಗೆ 35 ಕೆ.ಜಿ ಅಕ್ಕಿ, ಆದ್ಯತಾ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪ್ರತಿ ಕೆ.ಜಿ ಗೆ ರೂ.15ರಂತೆ ಒಪ್ಪಿಗೆ ನೀಡಿದ ಎ.ಪಿ.ಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ, ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು ಸರ್ಕಾರದ ಗ್ಯಾರಂಟಿ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಾಗಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.