ಕರಾವಳಿ ಟಾಪ್ ನ್ಯೂಸ್
ಕೋಟಿ ಮೌಲ್ಯದ ಚಿನ್ನ ಕದ್ದು ಸಾಗಣೆ: ಅರೆಸ್ಟ್
– ಕೋಟಾ ಪೊಲೀಸರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ
– ಕೇರಳದ ಸಿನಿಮಾ ನಿರ್ಮಾಪಕರ ಮನೆಯಿಂದ 1 ಕೋಟಿ ಚಿನ್ನಾಭರಣ ಕಳವು: ಬಿಹಾರ ಮೂಲದ ಆರೋಪಿ ಸೆರೆ
– ದೂರು ನೀಡುವ ಮೊದಲೇ ಕಳ್ಳನ ಹಿಡಿದ ಪೊಲೀಸ್!
– ಕುಂದಾಪುರದಲ್ಲಿ ಕಾರು – ಲಾರಿ ಡಿಕ್ಕಿ
– ಆರು ಜನ ಎಸ್ ಬಿಐ ಬ್ಯಾಂಕ್ ಉದ್ಯೋಗಿಗಳು ಗಂಭೀರ
NAMMUR EXPRESS NEWS
ಬ್ರಹ್ಮಾವರ: ಕೇರಳದ ಚಿತ್ರ ನಿರ್ಮಾಪಕರೊಬ್ಬರ ಮನೆಯಿಂದ ಕಳವು ಮಾಡಿ ಬಿಹಾರಕ್ಕೆ ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಕೊಂಡೊಯ್ಯುತ್ತಿದ್ದ ಅಂತರ್ ರಾಜ್ಯ ಕಳ್ಳನನ್ನು ಕೋಟ ಪೋಲಿಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮುಹಮ್ಮದ್ ಇರ್ಫಾನ್(35) ಬಂಧಿತ ಆರೋಪಿ. ಈತ ಭಾರೀ ಮೊತ್ತದ ಚಿನ್ನಾಭರಣವನ್ನು ಕದ್ದು ಕರಾವಳಿ ಮೂಲಕ ಕೊಂಡೊಯ್ಯುತ್ತಿದ್ದ ಆರೋಪಿ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಕೋಟ ಪೊಲೀಸರು ಮೂರ್ಕೈ ಸಮೀಪ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರಾವಳಿ ಪೊಲೀಸರ ಸಾಧನೆ
ಮಲೆಯಾಳಂ ಚಲನಚಿತ್ರ ನಿರ್ಮಾಪಕ ಜೋಶಿಯವರ ಕೊಚ್ಚಿ ಪನಂಪಲ್ಲಿಯ ಮನೆಯಲ್ಲಿ ಏ.20ರಂದು ಮುಂಜಾನೆ ಕಳ್ಳತನ ನಡೆದಿತ್ತು. ಮನೆಯ ಅಡುಗೆ ಕೋಣೆ ಬಾಗಿಲು ಒಡೆದು ಒಳನುಗ್ಗಿದ್ದ ಕಳ್ಳ ಕಪಾಟಿನಲ್ಲಿದ್ದ 10 ವಜ್ರದ ಉಂಗುರ, 12 ವಜ್ರದ ಕಿವಿಯೋಲೆ, 2 ಚಿನ್ನದ ಉಂಗುರ, 10 ಚಿನ್ನದ ನೆಕ್ಲೆಸ್, 10 ಚಿನ್ನದ ಬಲೆ, 10 ಕೈಗಡಿಯಾರ ಸಹಿತ ಬರೋಬ್ಬರಿ ಒಂದು ಕೋಟಿ ರೂ. ಮೌಲ್ಯದ 1.2 ಕೆಜಿ ಆಭರಣವನ್ನು ಕಳ್ಳತನ ಮಾಡಿದ್ದ. ಅಪಾರ ಪ್ರಮಾಣದ ಚಿನ್ನಾಭರಣವನ್ನು ಕೇರಳದಿಂದ ಕರ್ನಾಟಕ ಮಾರ್ಗವಾಗಿ ಬಿಹಾರಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಕೋಟ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ನಿಗದಿತ ಕಾರನ್ನು ತಪಾಸಣೆ ಮಾಡಿದಾಗ ಕಳ್ಳ ಸಿಕ್ಕಿ ಬಿದ್ದಿದ್ದ. ಆರೋಪಿ ಇರ್ಫಾನ್ನ್ನು ವಿಚಾರಣೆ ನಡೆಸಿದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಕೇರಳದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ!
ಕಳವು ನಡೆದಿದ್ದ ಸಂದರ್ಭದಲ್ಲಿ ನಿರ್ಮಾಪಕ ಜೋಶಿ ಅವರ ಕುಟುಂಬದವರು ಯಾರೂ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಮನೆಯಿಂದ ಚಿನ್ನಾಭರಣ ಕದ್ದು ಹೋಗಿರುವ ವಿಚಾರವು ಗೊತ್ತಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ಕೂಡ ಕೊಟ್ಟಿರಲಿಲ್ಲ. ಆದರೆ, ಕೇರಳದಿಂದ ಅನುಮಾನಾಸ್ಪದ ಕಾರೊಂದು ಸಂಚರಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಕಾರು ಕರ್ನಾಟಕದತ್ತ ಚಲಿಸಿರುವ ಬಗ್ಗೆ ಇಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಅದರಂತೆ ಕೋಟ ಠಾಣೆಯ ಎಸ್ಐ ತೇಜಸ್ವಿ, ಅಪರಾಧ ವಿಭಾಗದ ಎಸ್ಐ ಸುಧಾ ಪ್ರಭು, ಸಿಬ್ಬಂದಿಗಳಾದ ಗೋಪಾಲ ಪೂಜಾರಿ, ಪ್ರಸನ್ನ, ವಿಜಯೇಂದ್ರ ಮುಂತಾದವರು ಕಾರ್ಯಾಚರಣೆಗೆ ಇಳಿದಿದ್ದರು.
ಸಾಸ್ತಾನ ಟೋಲ್ ಪ್ಲಾಜಾ ಬಳಿ ಅನುಮಾನಿತ ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಚಾಲಕನು ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಫಾಲೋ ಮಾಡಿ ಚೇಸ್ ಮಾಡಿದ ಪೊಲೀಸರು ಕೋಟ ಮೂರುಕೈ ಸಮೀಪದಲ್ಲಿ ಅಡ್ಡ ನಿಲ್ಲಿಸಿ ಕಾರನ್ನು ತಡೆದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಕೇರಳದಲ್ಲಿ ನಡೆದ ದೊಡ್ಡ ಪ್ರಮಾಣದ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕುಂದಾಪುರ: ರಾ ಹೆ. 66ರ ನಾಗೂರು ಸಮೀಪದ ಅರೆ ಹೊಳೆ ಬೈಪಾಸ್ ಎಂಬಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಜನ ಎಸ್ಬಿಐ ಉದ್ಯೋಗಿಗಳು ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಗಾಯಾಳುಗಳು ಚಿಕ್ಕಮಗಳೂರು ಸುತ್ತಮುತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಾಗಿದ್ದಾರೆ.
ಬ್ಯಾಂಕ್ ಉದ್ಯೋಗಿಗಳಾದ ಅಂಥೋನಿ,ಪ್ರತಾಪ್, ಪ್ರೇಮ್, ಪ್ರಜ್ವಲ್, ಸುರೇಶ್ ಹಾಗೂ ಹಟ್ಟಿಕುದ್ರು ನಿವಾಸಿ ವಿಘ್ನೇಶ್ ಗಾಯಗೊಂಡವರು.ಕಾರಿನಲ್ಲಿ ಇದ್ದವರು ಶನಿವಾರ ಸಂಜೆ ತಮ್ಮ ಸ್ನೇಹಿತನಾದ ವಿಜ್ಞೇಶ್ ಮನೆಯಲ್ಲಿ ಬಂದು ಉಳಿದುಕೊಂಡಿದ್ದು ಭಾನುವಾರ ಮಧ್ಯಾಹ್ನ ಗೋಕರ್ಣ ದೇವಸ್ಥಾನಕ್ಕೆ ಹೊರಟಿದ್ದರು. ಸಂಜೆ ಸುಮಾರು 3 45ರ ಸುಮಾರಿಗೆ ನಾಗೂರು ಸಮೀಪದ ಅರೆಹೊಳೆ ಬೈಪಾಸ್ ಎಂಬಲ್ಲಿ ತಲುಪಿದಾಗ ಲಾರಿ ಡಿಕ್ಕಿಯಾಗಿದೆ.ಅಪಘಾತದ ತೀವ್ರತೆಗೆ ಕಾಲಿನಲ್ಲಿದ್ದ ಆರು ಜನರ ಪೈಕಿ ಐವರು ಗಂಭೀರ ಗಾಯಗೊಂಡಿದ್ದಾರೆ. ಪ್ರಜ್ವಲ್ ಹಾಗೂ ಅಂಥೋನಿ ಅವರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಾಪ್ ಮತ್ತು ಪ್ರೇಮ್ ಎಂಬುವರನ್ನು ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಂಧ್ರ ಪ್ರದೇಶ ಮೂಲದ ಸುರೇಶ್ ಎಂಬಾತನನ್ನ ಮತ್ತು ಹಟ್ಟಿ ಕುದ್ರು ನಿವಾಸಿ ವಿಜ್ಞೇಶ್ ಎಂಬುವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ