ಬಂಟ್ವಾಳ: ಬಾವಿಯೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ ಕಾರ್ಮಿಕರು.!
– ಆಕ್ಸಿಜನ್ ಕೊರತೆಯಿಂದ ಸ್ಥಳದಲ್ಲೇ ಸಾವು
– ಶಿವಮೊಗ್ಗ: ಇಬ್ಬರು ಮಕ್ಕಳು ನೀರಿಗೆ ಬಲಿ
– ಹಲ್ಲು ನೋವು ಎಂದು ಆಸ್ಪತ್ರೆ ಹೋದವ ಸಾವು
NAMMUR EXPRESS NEWS
ವಿಟ್ಲ: ಬಾವಿಗೆ ರಿಂಗ್ ಹಾಕುವಾಗ ಆಕ್ಸಿಜನ್ ಸಿಗದೇ ಇಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ. ಮೃತ ಕಾರ್ಮಿಕರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ, ಮಲಾರ್ ನಿವಾಸಿ ಆಲಿ ಎಂದು ಗುರುತಿಸಲಾಗಿದೆ. ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಕಾರ್ಮಿಕ ಆಕ್ಸಿಜನ್ ಕೊರತೆಯಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಬಾವಿಗೆ ಇಳಿದವನು ಮೇಲಕ್ಕೆ ಬಾರದಿರುವ ಹಿನ್ನೆಲೆ ಇನ್ನೊಬ್ಬ ಇಳಿದಿದ್ದು, ಈ ವೇಳೆ ಆತನೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾನೆ. ಮೃತದೇಹವನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ನೀರು ಪಾಲಾಗಿದ್ದ ಇಬ್ಬರು ಬಾಲಕರ ಮೃತ ದೇಹ ಪತ್ತೆ
ಆನ್ವೇರಿಯ ಗುಡುಮಗಟ್ಟೆಯ ಭದ್ರ ಉಪಚಾನೆಲ್ ನಲ್ಲಿ ಈಜಲು ಹೋದ ಇಬ್ಬರು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ರಾತ್ರಿಯೇ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಆನ್ವೇರಿಯ ಭದ್ರ ಚಾನೆಲ್ ನಲ್ಲಿ ಈಜಲು ಹೋದ ಇಬ್ಬರು ಬಾಲಕರು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಅವರನ್ನ ಹುಡುಕಲು ಆರಂಭಿಸಿದ್ದರು. ಯುವಕರು ಎಲ್ಲೂ ಪತ್ತೆಯಾಗದ ಕಾರಣ ಚಾನೆಲ್ ದಂಡೆಯ ಮೇಲೆ ಬಾಲಕರ ಬಟ್ಟೆಗಳು ಪತ್ತೆಯಾಗಿದ್ದವು. ಈ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ಹೊಳೆಹೊನ್ನೂರು ಪೊಲೀಸರು ಶೋಧಕಾರ್ಯ ಆರಂಭಿಸಿದ್ದರು. ರಾತ್ರಿಯೇ ಅವರ ಮೃತ ದೇಹ ಪತ್ತೆಯಾಗಿದೆ. ಮೃತರಾದವರನ್ನ ಆನ್ವೇರಿಯ ಉಮೇಶ್ ಶೆಟ್ಟಿಯವರ ಮಗ ರಜತ್ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್ ಶೆಟ್ಟಿ ಅವರ ಮಗ ರೋಹನ್ (15) ಎಂದು ಗುರುತಿಸಲಾಗಿದೆ. ಇಬ್ವರು ಬಾಲಕರು ಚಾನೆಲ್ ನೀರಿನಲ್ಲಿ ಈಜಲು ಹೋಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೈದ್ಯರ ನಿರ್ಲಕ್ಷ್ಯದಿಂದ ಸಾವು ಆರೋಪ: ಪ್ರತಿಭಟನೆ
ನೋವಿಗೆ ಚಿಕಿತ್ಸೆ ಪಡೆದಿದ್ದ ಕುಮಾರ್ (55) ಎಂಬುವವರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಠಾಣೆ ಎದುರು ಮೃತದೇಹ ಇರಿಸಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಸ್ಟ್ರೆಚರ್ನಲ್ಲಿ ಮೃತದೇಹವನ್ನು ತಂದಿದ್ದ ಸಂಬಂಧಿಕರು, ಠಾಣೆ ಎದುರು ನಿಲ್ಲಿಸಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಕುಮಾರ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಸುಬ್ರಹ್ಮಣ್ಯನಗರದ ಕುಮಾರ್, ಹಲ್ಲು ನೋವಿನ ಚಿಕಿತ್ಸೆಗೆಂದು ಇತ್ತೀಚೆಗೆ ದಂತ ವೈದ್ಯರೊಬ್ಬರ ಬಳಿ ಹೋಗಿದ್ದರು. ತಪಾಸಣೆ ನಡೆಸಿದ್ದ ವೈದ್ಯ, ನೋವಿಗೆ ಚಿಕಿತ್ಸೆ ಕೊಟ್ಟಿದ್ದರು. ಆದರೆ, ಮುಖ ಊದಿಕೊಂಡಿತ್ತು.
ಎರಡೂ ಕಣ್ಣಿಗೂ ಹಾನಿಯಾಗಿತ್ತು ಎಂದು ಸಂಬಂಧಿಕರೊಬ್ಬರು ಹೇಳಿದರು. ಮುಖ ಊದಿಕೊಂಡು ತೀವ್ರ ನೋವು ಅನುಭವಿಸುತ್ತಿದ್ದ ಕುಮಾರ್ ಅವರನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಕುಮಾರ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಂತ ವೈದ್ಯರ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯ ಉಂಟಾಗಿರುವುದಾಗಿ ವೈದ್ಯರು ಹೇಳಿದ್ದರು. ಹೀಗಾಗಿ, ದಂತ ವೈದ್ಯರ ವಿರುದ್ಧ ದೂರು ನೀಡಲು ಠಾಣೆಗೆ ಹೋಗಿದ್ದೆವು ಎಂದು ತಿಳಿಸಿದರು.