ಕರ್ನಾಟಕ ಟಾಪ್ 3 ನ್ಯೂಸ್..!
– ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಮೃತ್ಯು!
– ಬೆಂಗಳೂರು: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ
– ಹುಣಸೂರು: ಮತ ಚಲಾಯಿಸಿ ಹೊರಬರುತ್ತಿದ್ದಂತೆ ಮೃತಪಟ್ಟ ವೃದ್ಧೆ
NAMMUR EXPRESS NEWS
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಲೋ ಬಿಪಿಯಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತ ಮಹಿಳೆ ಚಳ್ಳಕೆರೆ ಪಟ್ಟಣದ ವಿಠಲ ನಗರದ ಯಶೋಧಮ್ಮ (55) ಎಂದು ತಿಳಿದು ಬಂದಿದೆ. ಯಶೋದಮ್ಮ ಅವರು ಲೋ ಬಿಪಿಯಿಂದಾಗಿ ಅಸ್ವಸ್ಥಗೊಂಡಿದ್ದರು. ಇವರನ್ನು ಕೂಡಲೆ ಚಳ್ಳಕೆರೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು, ಆದರೆ ದಾರಿ ಮಧ್ಯದಲ್ಲೇ ಮೃತಪಟ್ಟರು. ಚಳ್ಳಕೆರೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ:
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮತ ಚಲಾಯಿಸಲು ಬಂದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನ ಆಗಿದೆ. ಬಳಿಕ ಅಲ್ಲಿಯೇ ಮತ ಚಲಾಯಿಸಲು ಬಂದಿದ್ದರಿಂದ ಅವರ ಜೀವ ಉಳಿದಿದೆ. ಜೆ.ಪಿ. ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಬಂದಿದ್ದಾರೆ. ಅವರು ಆಯಾಸವಾಗಿದೆ ಎಂದು ಮತಗಟ್ಟೆಯಲ್ಲಿ ಇಟ್ಟಿದ್ದ ನೀರು ಕುಡಿಯಲು ಹೋಗಿದ್ದಾರೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ರಕ್ಷಣೆಗೆ ದಾವಿಸಿದ್ದಾರೆ.
ನಾಡಿಮಿಡಿತವನ್ನು ಪರಿಶೀಲಿಸಿದ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್, ಪಲ್ಸ್ ರೇಟ್ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಆ ಸಮಯದಲ್ಲಿ ದೇಹ ಕೂಡ ಯಾವುದೇ ಸ್ಪಂದನೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕೂಡಲೇ ಸಿಪಿಆರ್ ಮಾಡಿದ್ದು, ಪರಿಸ್ಥಿತಿಯು ಕೊಂಚ ಮಟ್ಟಿಗೆ ಸುಧಾರಿಸುವಂತೆ ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಲಾಗಿದೆ. ಐದು ನಿಮಿಷದೊಳಗೆ ಮತಗಟ್ಟೆ ಬಳಿ ಆಂಬ್ಯುಲೆನ್ಸ್ ಬಂದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹುಣಸೂರು: ಮತ ಚಲಾಯಿಸಿ ಹೊರಬರುತ್ತಿದ್ದಂತೆ ಮೃತಪಟ್ಟ ವೃದ್ಧೆ:
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಮತಗಟ್ಟೆಯಿಂದ ಹೊರಬರುತ್ತಿದ್ದಂತೆ ವೃದ್ಧೆಯೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪುಟ್ಟಮ್ಮ(90) ಮೃತಪಟ್ಟವರು. ತಿಪ್ಪೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 172ರಲ್ಲಿ ಮತ ಚಲಾಯಿಸಿ ಮತಗಟ್ಟೆಯಿಂದ ಹೊರಬಂದ ಪುಟ್ಟಮ್ಮ ಕುಸಿದುಬಿದ್ದು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.